ಚಿಕ್ಕಮಗಳೂರು:ಹಾಸನ ವಿಧಾನಸಭೆ ಕ್ಷೇತ್ರದ ಕುರಿತಂತೆ ಜೆಡಿಎಸ್ನಲ್ಲಿ ಟಿಕೆಟ್ ಗುದ್ದಾಟ ನಡೆಯುತ್ತಿದೆ. ಈ ನಡುವೆ ಭವಾನಿ ರೇವಣ್ಣನಿಗೆ ಬಿಜೆಪಿಗೆ ಬರುವಂತೆ ಸಿ.ಟಿ.ರವಿ ಆಫರ್ ನೀಡಿದ್ದಾರೆ. ''ನಾನು ಸಹೋದರಿ ಭವಾನಿ ಹಾಗೂ ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ನಾನು ಮನೆಯಲ್ಲಿ ಗಲಾಟೆ ಹಚ್ಚಿಸಲು ಬಯಸುವುದಿಲ್ಲ. ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಾರ್ಟಿಯಿಂದ ಅಭ್ಯರ್ಥಿ ಆಗಬೇಕು ಎನ್ನುವುದಿತ್ತು. ಭವಾನಿ ಅವರು ಹೊಳೆನರಸೀಪುರದಿಂದ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗಲಿ. ಭವಾನಿ ಅವರಿಗಿಂತ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ" ಎಂದು ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಸುಮಲತಾ ಜನಪ್ರಿಯರಾಗಿದ್ದಾರೆ- ಸಿಟಿ ರವಿ: ಪಕ್ಷದ ನೀತಿಯನ್ನು ಒಪ್ಪಿಕೊಂಡು ಯಾರ್ಯಾರು ಬರ್ತಾರೆ ಬರಬಹುದು. ಸುಮಲತಾ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿಗಳ ಎದುರು ಗೆದ್ದು ಬಂದವರು. ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರೆ ತುಂಬಾ ಸಂತೋಷ. ಇದರಿಂದ ಪಕ್ಕಕ್ಕೆ ಬಲ ಬರುತ್ತದೆ ಎಂದು ಸಿ.ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.
’ಉದರನಿಮಿತ್ತಂ ಬಹುಕೃತವೇಷಂ’:ಒಬ್ಬ ಸಿದ್ದರಾಮಯ್ಯ, ನಾಮ ಹಲವು ಪೋಸ್ಟರ್ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, "ಉದರನಿಮಿತ್ತಂ ಬಹುಕೃತವೇಷಂ ಎಂಬ ಮಾತಿದೆ. ಅಂತೆಯೇ ಓಟು ನಿಮಿತ್ತಂ, ಬಹುಕೃತ ಬಹುಕೃತವೇಷಂ. ವೋಟಿಗೋಸ್ಕರ ಹಲವು ವೇಷ ಹಾಕುತ್ತಿದ್ದಾರೆ. ಗಳಿಗೆಗೊಂದು ಬದಲಾಗಬಾರದು. ನಿಯತ್ತು ಮತ್ತು ನೀತಿ ಒಂದೇ ಇರಬೇಕು. ನಿಯತ್ತು ಬದಲಾಗೋದು ನೀತಿ ಬದಲಾಗೋದು ಒಳ್ಳೆಯ ನಾಯಕನ ಲಕ್ಷಣ ಅಲ್ಲ. ಜಾತಿ ಸಭೆಯಲ್ಲಿ ಜಾತಿವಾದಿ ತರ, ಹೊರಗಡೆ ಜಾತ್ಯಾತೀತವಾಗಿ ಮಾತಾನಾಡುವುದು. ಹಿಂದುತ್ವದ ವಿರುದ್ಧ ಮಾತಾನಾಡೋದು, ಹೊರಗಡೆ ಬಂದು ಹಿಂದೂ ಅನ್ನೋದು. ಅದು ನೀತಿ, ನಿಯತ್ತು ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಕುಟುಕಿದರು.
ಭವಾನಿ ರೇವಣ್ಣ ಸ್ವಯಂ ಘೋಷಣೆ: ಜ. 21ರಂದುನಾನೇ ಹಾಸನದ ಜೆಡಿಎಸ್ ಅಭ್ಯರ್ಥಿ. ಇನ್ನು ಸ್ವಲ್ಪದರಲ್ಲೇ ಪಕ್ಷದ ವರಿಷ್ಠರು ನನ್ನ ಹೆಸರನ್ನು ಪ್ರಕಟ ಮಾಡಲಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಪತ್ನಿ ಜಿ.ಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಸ್ವಯಂ ಘೋಷಿಸಿಕೊಂಡಿದ್ದರು. ಹಾಸನ ತಾಲೂಕಿನ ಸಾಲಗಾಮೆ ಬಳಿ ನಡೆದ ಅಣ್ಣಪ್ಪ ಸ್ವಾಮಿ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ನನ್ನ ಪತಿ ಹೆಚ್.ಡಿ ರೇವಣ್ಣ ಅವರು ಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.