ಚಿಕ್ಕಬಳ್ಳಾಪುರ:ವಿಶ್ವ ಯೋಗ ದಿನದ ಅಂಗವಾಗಿ ಜೂ.21ರಂದು ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನದಲ್ಲಿ 30 ರಿಂದ 35 ಸಾವಿರ ಲಸಿಕೆ ಹಾಕಲು ಗುರಿ ನಿಗದಿಪಡಿಸಿಕೊಳ್ಳಲಾಗಿತ್ತು. ಆ ಗುರಿಯನ್ನು ಮೀರಿ ಲಸಿಕೆ ನೀಡುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ 3,95,000 ಡೋಸ್ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ. ಈ ಪೈಕಿ ಮೊದಲ ಡೋಸ್ ಲಸಿಕೆಯನ್ನು 3,30,588 ಜನರಿಗೆ ನೀಡಲಾಗಿದ್ದು, 64,412 ಜನರು 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಲಸಿಕಾ ಅಭಿಯಾನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಎಲ್ಲರೂ ಎರಡೂ ಡೋಸ್ ಲಸಿಕೆ ಪಡೆಯುವವರೆಗೆ ಅಭಿಯಾನ ಮುಂದುವರೆಯಬೇಕು. ಈ ಹಿನ್ನೆಲೆಯಲ್ಲಿ 57 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 69 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯ ಮುಂದುವರಿಯಲಿದೆ. ಇದರ ಸದುಪಯೋಗವನ್ನ ಎಲ್ಲರೂ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.