ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಇದುವರೆಗೂ 3,500ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿ, ತಮ್ಮ ದೈನಂದಿನ ಜೀವನಕ್ಕೆ ಮರಳುತ್ತಿದ್ದಾರೆ. ಚೇತರಿಕೆಯಲ್ಲೂ ಜಿಲ್ಲೆ ದಾಖಲೆ ಮಾಡಿದೆ.
ಆದರೆ, ಸೋಂಕಿತ ವ್ಯಕ್ತಿಗಳು ಗುಣಮುಖಗೊಂಡ ಮನೆಗೆ ಹಿಂತಿರುಗುವ ವೇಳೆ ಸಾಕಷ್ಟು ಅವಮಾನ, ತೊಂದರೆಗಳನ್ನು ಅನುಭವಿಸುವಂತಾಗಿದೆ. ಇದರ ಬಗ್ಗೆ ಸೋಂಕಿತ ವ್ಯಕ್ತಿಗಳು ಗುಣಮುಖಗೊಂಡವರು ತಮ್ಮ ಅಭಿಪ್ರಾಯಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಕಳೆದ ಜುಲೈನಲ್ಲಿ ದೇಹ ಹಾಗೂ ಕೈ, ಕಾಲುಗಳಲ್ಲಿ ನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಹೋದಾಗ ಕಿಟ್ ಇಲ್ಲ. ಯಾವುದೇ ಸೋಂಕು ಇಲ್ಲ ಎಂದು ನಿರ್ಲಕ್ಷ್ಯಿಸಿ ವಾಪಾಸ್ ಕಳುಹಿಸಲಾಯಿತು. ನನಗೆ ಅನುಮಾನವಿದ್ದ ಕಾರಣ ಮತ್ತೆ ಕೋಲಾರ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದೆ. ಆದರೆ ಅಲ್ಲಿ ಏನಾಗಿದೆ ಎಂದು ಇಲ್ಲಿಯವರೆಗೂ ಮಾಹಿತಿ ನೀಡಿಲ್ಲ. ನಂತರ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದಾಗ ಪಾಸಿಟಿವ್ ಬಂದಿತ್ತು ಎನ್ನುತ್ತಾರೆ ಸುಜಯ್ ಕುಮಾರ್.
ಸೋಂಕಿನಿಂದ ಗುಣಮುಖರಾದರು ಒಂದು ತಿಂಗಳು ದೇಹದಲ್ಲಿ ಸುಸ್ತು ಇರುತ್ತದೆ. ಇನ್ನೂ ಪಾಸಿಟಿವ್ ಬಂದ ವೇಳೆ ಸ್ನೇಹಿತರು, ಕುಟುಂಬಸ್ಥರು ಸಾಕಷ್ಟು ಸಹಕಾರ ಕೊಟ್ಟು ಬಹಳಷ್ಟು ಧೈರ್ಯ ತುಂಬಿದರು. ಇನ್ನೂ ಸರ್ಕಾರದಿಂದ ಬಹಳಷ್ಟುಸೌಲಭ್ಯಗಳನ್ನು ನೀಡಲಾಯಿತು. ಆ್ಯಂಬ್ಯುಲೈನ್ಸ್ ಸೇವೆ ಒದಗಿಸಿ, ಆರೋಗ್ಯದ ಕಡೆ ಕಾಳಾಜಿ ವಹಿಸುವಂತೆ, ಆರೋಗ್ಯ ಸಿಬ್ಬಂದಿ ಧೈರ್ಯ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಗಡಿಯಲ್ಲಿ ಕೆಲಸ ನಿರ್ವಹಿಸುವ ವೇಳೆ ಸಾಕಷ್ಟು ಆಯಾಸವಾಗುತ್ತಿತ್ತು. ಮಾಲೀಕರು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಿದರು. ನಂತರ ಪರೀಕ್ಷಿಸಿದ್ದಾಗ ನೆಗಟಿವ್ ಬಂದಿತ್ತು. ಇನ್ನೂ ಕೆಲಕಾಲ ಮನೆಯಲ್ಲೇ ಇರುವಂತೆ ಮಾಲೀಕರು ಸೂಚಿಸಿದರು. ತದ ನಂತರ ಪರೀಕ್ಷಿಸಿದಾಗ ಪಾಸಿಟಿವ್ ಬಂತು. ಜಿಲ್ಲಾ ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಕೆಲಸಕ್ಕೆ ಹಾಜರಾದ ವೇಳೆ ಎಲ್ಲಿ ಹೋದರು ವಿಚಿತ್ರವಾಗಿ ನೋಡುತ್ತಿದ್ದರು. ಇದರಿಂದ ಸಾಕಷ್ಟು ನೋವಾಗುತ್ತಿತ್ತು ಎಂದು ಸೋಂಕಿನಿಂದ ಗುಣಮುಖಗೊಂಡ ವ್ಯಕ್ತಿ ತಮಗಾದ ಅನುಭವವನ್ನು ಹಂಚಿಕೊಂಡರು.