ಚಿಕ್ಕಬಳ್ಳಾಪುರ:ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಪ್ಯಾಸೆಂಜರ್ ರೋಪ್‌ವೇ ನಿರ್ಮಾಣ ಮಾಡುವ ಕಾಮಗಾರಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುಧಾಕರ್, ಆರ್ ಅಶೋಕ್, ಎಂಟಿಬಿ ನಾಗರಾಜ್ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಅಸಂಖ್ಯಾತ ಪ್ರವಾಸಿಗರ ಬಹು ದಶಕಗಳ ಕನಸನ್ನು ನನಸಾಗಿಸುವ ಕಾರ್ಯಕ್ಕೆ ಇಂದು ಚಾಲನೆ ದೊರೆತಿದ್ದು, ಖ್ಯಾತ ಕನ್ನಡ ಚಲನಚಿತ್ರ ನಟ ಶಂಕರ್ ನಾಗ್ ಅವರು ಪಂಚಗಿರಿ ನಂದಿಗಿರಿಧಾಮದಲ್ಲಿ ರೋಪ್‌ವೇ ನಿರ್ಮಿಸಬೇಕು ಎಂದು ಒತ್ತಾಸೆ ಪಟ್ಟಿದ್ದರು ಎಂದರು.
ರೋಪ್ ವೇ ಕಾಮಗಾರಿ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ವೇ ಅಭಿವೃದ್ಧಿಪಡಿಸುವ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಸುಮಾರು 2.93 ಕಿ.ಮೀ ದೂರದ ರೋಪ್‌ವೇ ಅಭಿವೃದ್ಧಿಪಡಿಸಲಾಗುತ್ತದೆ. ಡೈನಾಮಿಕ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ 30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ನಿರ್ಮಾಣ, ವಿನ್ಯಾಸ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (DBFOT) ಚೌಕಟ್ಟಿನ ಮೇಲೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
ಐತಿಹಾಸಿಕ ತಾಣ ಮತ್ತು ಪಾರಂಪರಿಕ ಸ್ಮಾರಕಗಳಿಗೆ ನೆಲೆಯಾಗಿರುವ ನಂದಿ ಬೆಟ್ಟ ಟ್ರಕ್ಕಿಂಗ್, ಸೈಕ್ಲಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ನಂತಹ ಸಾಹಸ ಕ್ರೀಡೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಂತಹ ತಾಣ ತಲುಪಲು ರೋಪ್‌ವೇಯ ವೇಗ ಮತ್ತು ಪರಿಸರ ಸ್ನೇಹಿ ಸಾರಿಗೆ ಸೌಲಭ್ಯ, ಅನುಕೂಲ ಕಲ್ಪಿಸುವುದರೊಂದಿಗೆ ತಲುಪುವ ಸಮಯ ಉಳಿಸಲಾಗುತ್ತದೆ. ಪ್ರವಾಸಿಗರಿಗೆ ಸುತ್ತಮುತ್ತಲಿನ ಪ್ರದೇಶದ ಮೈಮಾನಿಕ ಚಿತ್ರಣ ನೀಡುವುದರ ಜೊತೆಗೆ ಈ ಭಾಗದಲ್ಲಿ ಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಿದೆ.
ರೋಪ್‌ವೇ ನಿರ್ಮಾಣ ಸುಗಮ ಸಂಪರ್ಕದ ಜತೆಗೆ ನಂದಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ. ಬೆಟ್ಟದ ಮೇಲಿನ ಮತ್ತು ಕೆಳಗಿನ ಲ್ಯಾಂಡಿಂಗ್ ಸ್ಟೇಷನ್‌ಗಳಲ್ಲಿ ವಿವಿಧ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ. ಬೆಟ್ಟದ ಕೆಳಗಿನ ಟರ್ಮಿನಲ್ನಲ್ಲಿ- 480 ದ್ವಿಚಕ್ರ, 410 ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪುಡ್ ಕೋರ್ಟ್, ಕುಡಿಯುವ ನೀರಿನ ಘಟಕಗಳು, ಶೌಚಾಲಯ ವ್ಯವಸ್ಥೆ, ಟಿಕೆಟ್ ಕೌಂಟರ್ಗಳು, ವಿಶ್ರಾಂತಿ ಕೊಠಡಿಗಳು, ರೆಸ್ಟೋರೆಂಟ್, ಮಳಿಗೆಗಳು ಇರುತ್ತವೆ.