ಚಿಕ್ಕಬಳ್ಳಾಪುರ: ಸೋಮವಾರ ಜಿಲ್ಲೆಗೆ ಆಗಮಿಸಿದ ಪ್ರಜಾ ಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಕೈ ನಾಯಕರಿಗೆ ಬೃಹತ್ ಸೇಬಿನ ಹಾರಗಳನ್ನು ಹಾಕಿ ಕಾರ್ಯಕರ್ತರು ಬರಮಾಡಿಕೊಂಡರು. ಬಳಿಕ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ವಿರುದ್ಧ ಕಿಡಿಕಾರಿದರು.
"ಬಸವರಾಜ ಬೊಮ್ಮಾಯಿ ತಾಕತ್ ಇದ್ರೆ ಒಂದೇ ವೇದಿಕೆಗೆ ಬರಲಿ, ಯಾರು ಏನು ಮಾಡಿದ್ದಾರೆ ಎಂದು ಗೊತ್ತಾಗಲಿದೆ. ಸುಧಾಕರ್ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ವೀರಪ್ಪ ಮೊಯ್ಲಿ ಅವರು ಹೇಳಿದ್ರು, ಸುಧಾಕರ್ ವಂಚಕ ಆತನಿಗೆ ಟಿಕೆಟ್ ಬೇಡ ಅಂದಿದ್ರು. ಆದ್ರೂ ಟಿಕೆಟ್ ಕೊಟ್ಟಿದ್ದೆವು. ಆದರೆ ಈಗ ಪಶ್ಚಾತ್ತಾಪ ಪಡುವಂತಾಗಿದೆ. ಮುಂಬೈಗೆ ಹೋಗುವ ಹಿಂದಿನ ಮಧ್ಯರಾತ್ರಿವರೆಗೆ ಬಿಜೆಪಿ ಸೇರಲ್ಲ ಎಂದು ಸುಧಾಕರ್ ಮಾತು ಕೊಟ್ಟು ಬೆಳಿಗ್ಗೆದ್ದು ಮುಂಬೈಗೆ ಹೋಗಿದ್ದರು. ಅವರು ಯಾವುದೇ ಕಾರಣಕ್ಕೂ ಮತ್ತೆ ಗೆಲ್ಲಬಾರದು" ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಸುಧಾಕರ್ ಭ್ರಷ್ಟ ಸಚಿವ. ಆದ್ರೆ ಅವ್ರೇ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಕೊರೊನಾ ವೇಳೆ ಮಾಸ್ಕ್, ವೆಂಟಿಲೇಟರ್, ಆಕ್ಸಿಜನ್ನಲ್ಲಿ 2 ಸಾವಿರ ಕೋಟಿ ರೂ ಲಂಚ ತೆಗೆದುಕೊಂಡಿದ್ದಾರೆ ಎಂದು ಸಾಕ್ಷ್ಯಾಧಾರಗಳಿಂದ ಆರೋಪ ಮಾಡಿದ್ದೆ ಎಂದಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ 40% ಕಮಿಷನ್ ಆಡಳಿತ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಸತ್ತ ಜನತೆಯ ಮೇಲೆ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, "ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಒಂದು ಸಣ್ಣ ಕಪ್ಪು ಚುಕ್ಕಿ ಇಲ್ಲದೆ ಆಡಳಿತ ನಡೆಸಿದ್ದೇವೆ. ರೈತರ ಆದಾಯ ಡಬಲ್ ಆಗುತ್ತೆ ಅಂತಾ ಹೇಳಿದ ಪ್ರಧಾನಿ ಮೋದಿ ಏನು ಕೊಟ್ಟಿದ್ದಾರೆ?, ಪಕ್ಷ ಬಿಟ್ಟ ಮಿಸ್ಟರ್ ಸುಧಾಕರ್ ಏನು ಮಾಡಿದ್ದಾರೆ? ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸ್ಕ್ಯಾಮ್ ಮಾಡಿ ಇಡೀ ದೇಶ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ" ಎಂದು ಕಿಡಿಕಾರಿದರು.