ಚಿಕ್ಕಬಳ್ಳಾಪುರ : ಇಡಿ ವಿಚಾರಣೆ ಹೆಸರಿನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಕಾಂಗ್ರೆಸ್‌ನ ಮಾಜಿ ಹಾಲಿ ಶಾಸಕರು ಹಾಗೂ ಸಚಿವರು ತಮ್ಮ ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಬಿಬಿ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ನಗರದ ಅಂಬೇಡ್ಕರ್ ವೃತ್ತದ ಬಳಿ ಏರ್ಪಡಿಸಿದ್ದ ಪ್ರತಿಭಟನಾ ವೇದಿಕೆಯಲ್ಲಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರಾದ ರಾಮಲಿಂಗಾರೆಡ್ಡಿ , ವಿ.ಎಸ್ ಉಗ್ರಪ್ಪ, ಶಾಸಕರಾದ ಎಸ್ಎನ್ ಸುಬ್ಬಾರೆಡ್ಡಿ. ವಿ.ಮುನಿಯಪ್ಪ , ಮಾಜಿ ಶಾಸಕರಾದ ಎಂ ಸಿ ಸುದಾಕರ್ , ಎಸ್ ಎಂ ಮುನಿಯಪ್ಪ, ಅನಸೂಯಮ್ಮ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಬೃಹತ್ ಪ್ರತಿಭಟನೆ ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಎಂಸಿ ಸುಧಾಕರ್, ಸಚಿವ ಸುಧಾಕರ್ ಬಗ್ಗೆ ಗಂಭೀರ ಆರೋಪ ಮಾಡಿದರು. ಚಿಕ್ಕಬಳ್ಳಾಪುರದಿಂದ ಹೋಗುವ ಒಂದೊಂದು ಜಲ್ಲಿಕಲ್ಲು ಸಚಿವ ಸುಧಾಕರ್ ಹೆಸರು ಹೇಳುತ್ತವೆ. ಬಳ್ಳಾರಿಯಲ್ಲಿ ಕಲ್ಲು ಗಣಿಗಾರಿಕೆ ನಡೆದ ರೀತಿಯಲ್ಲಿ ಚಿಕ್ಕಬಳ್ಳಾಪುರದಲ್ಲಿಯೂ ನಡೆಯುತ್ತಿದೆ. ಯಾವ ಯಾವ ಹಂತದಲ್ಲಿ ಎಷ್ಟೆಷ್ಟು ಹಣ ಲೂಟಿ ಆಗಿದೆ ಅಂತ ಗೊತ್ತಿದೆ. ಭ್ರಷ್ಟಾಚಾರ ತುಂಬಾ ದಿನ ನಡೆಯೋದಿಲ್ಲ. ಎಲ್ಲದಕ್ಕೂ ಅಂತ್ಯ ಕಾಣಿಸುವ ಸಮಯ ಬಂದೇ ಬರುತ್ತದೆ. ಚಿಕ್ಕಬಳ್ಳಾಪುರ ಜನತೆ ಒಂದಲ್ಲ ಒಂದು ದಿನ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿಯವರು ಕೆಟ್ಟ ಜನ. ಹಿಟ್ಲರ್ ವಂಶಸ್ಥರು. ಬಿಜೆಪಿಯವರಿಗೆ ಒಳ್ಳೇ ಕೆಲಸ ಮಾಡುವ ಅಭ್ಯಾಸವೇ ಇಲ್ಲ. ಬೇರೆಯವರನ್ನು ಒಳ್ಳೆಯದು ಮಾಡೋದಕ್ಕೂ ಬಿಡೋದಿಲ್ಲ. ರಾಜ್ಯ ಹಾಗೂ ದೇಶದಲ್ಲಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರಿಗೆ ಈ ದೇಶದಲ್ಲಿ ಯಾವುದೇ ವಿರೋಧ ಪಕ್ಷ ಇರಬಾರದು ಎಂಬುದೇ ಬಿಜೆಪಿಯ ಕುತಂತ್ರವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಸುಳ್ಳು ಪ್ರಕರಣ ದಾಖಲಿಸಿ ಪ್ರತಿಪಕ್ಷಗಳನ್ನು ಕುಗ್ಗಿಸುವ ಯತ್ನ ಮಾಡಲಾಗುತ್ತಿದೆ. ಆಪರೇಷನ್ ಕಮಲ, ಶಾಸಕರ ಖರೀದಿ ಮಾಡಿ ಅಧಿಕಾರ ಹಿಡಿಯುತ್ತಿದೆ. ಅಂತವರೇ ಇಂದು ನೀತಿ ಮಾತುಗಳನ್ನು ಹೇಳುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.