ಚಿಕ್ಕಬಳ್ಳಾಪುರ : ಇಶಾ ಫೌಂಡೇಷನ್ ನಾಗಪೂಜೆಯಲ್ಲಿ ಅಕ್ರಮವಾಗಿ ಜೀವಂತ ಹಾವನ್ನು ಹಿಡಿದು ಆರಾಧಿಸಿದ್ದಾರೆ ಎಂದು ಆರೋಪಿಸಿ ಇಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಈಗ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಚಿಕ್ಕಬಳ್ಳಾಪುರದಲ್ಲಿ ದೂರು ನೀಡಲಾಗಿತ್ತು.
ಶನಿವಾರ ಚಿಕ್ಕಬಳ್ಳಾಪುರ ಹೊರವಲಯದ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಇಶಾ ಆದಿಯೋಗಿ ಧ್ಯಾನ ಕೇಂದ್ರದ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಪ್ರಖರವಾದ ಬೆಳಕಿನಲ್ಲಿ ಲಕ್ಷಾಂತರ ಜನಸ್ತೋಮದ ನಡುವೆ ಜೀವಂತ ಹಾವನ್ನು ಹಿಡಿದು ಹಿಂಸೆ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ದೂರು ನೀಡಲಾಗಿತ್ತು.
ಜಗ್ಗಿ ವಾಸುದೇವ್ ಹಾವನ್ನು ಅಕ್ರಮವಾಗಿ ಹಿಡಿದು ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಡಿ ಚಿಕ್ಕಬಳ್ಳಾಪುರದ ಉರಗತಜ್ಞ ಸಿ.ಎನ್. ಪೃಥ್ವಿರಾಜ್ ಅವರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಇಶಾ ಫೌಂಡೇಶನ್ ಸ್ಪಷ್ಟನೆ:ದೂರಿನ ಬೆನ್ನಲ್ಲೇ ಇಶಾ ಫೌಂಡೇಶನ್ ಕಡೆಯಿಂದ ಸ್ಪಷ್ಟನೆ ನೀಡಲಾಗಿದ್ದು, ಹಾವು ಸೆರೆ ಹಿಡಿದಿರುವುದಲ್ಲ ಅಥವಾ ಸ್ಥಳಕ್ಕೆ ಅಕ್ರಮವಾಗಿ ತಂದಿರುವುದೂ ಅಲ್ಲ ಎಂದು ತಿಳಿಸಲಾಗಿದೆ. ಈ ಬಗ್ಗೆ ಇಶಾ ಫೌಂಡೇಶನ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 'ಚಿಕ್ಕಬಳ್ಳಾಪುರದಲ್ಲಿ ನಾಗಪ್ರತಿಷ್ಠಾಪನೆ ವೇಳೆ ಸ್ಥಳಕ್ಕೆ ಹಾವೊಂದು ಪ್ರವೇಶಿಸಿತ್ತು. ಉರಗ ಮತ್ತು ಅಲ್ಲಿದ್ದ ಜನರ ಸುರಕ್ಷತೆ ದೃಷ್ಟಿಯಿಂದ ಅದನ್ನು ಸದ್ಗುರುಗಳು ಯಾವುದೇ ತೊಂದರೆ ನೀಡದೆ ಹಿಡಿದುಕೊಂಡಿದ್ದರು. ಬಳಿಕ ಅದನ್ನು ಹತ್ತಿರದ ಕಾಡಿನಲ್ಲಿ ಸುರಕ್ಷಿತವಾಗಿ ಬಿಡುವಂತೆ ತಿಳಿಸಿದ್ದರು. ಹಾವಿಗೆ ಯಾವುದೇ ರೀತಿಯ ತೊಂದರೆ ನೀಡಿಲ್ಲ, ಅದು ಸೆರೆ ಹಿಡಿರುವುದಾಗಲಿ ಅಥವಾ ಅಥವಾ ಸಾಗಿಸಿ ತಂದಿರುವುದಾಗಲಿ ಅಲ್ಲ. ಸ್ಥಳದಲ್ಲಿದ್ದ ಪೊಲೀಸರಿಗೆ ಈ ಘಟನೆಯ ಬಗ್ಗೆ ತಿಳಿದಿದೆ' ಎಂದು ಸ್ಪಷ್ಟೀಕರಿಸಲಾಗಿದೆ.
ಇದನ್ನೂ ಓದಿ :ಚಿಕ್ಕಬಳ್ಳಾಪುರದಲ್ಲಿ ಈಶಾ ಫೌಂಡೇಶನ್‌ನ ನಾಗಮಂಟಪ ಉದ್ಘಾಟನೆ