ಚಿಕ್ಕಬಳ್ಳಾಪುರ:ಬಾಗೇಪಲ್ಲಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವತಿಯಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಭ್ರಷ್ಟಾಚಾರ ನಿಗ್ರಹ ದಳ ಚಿಕ್ಕಬಳ್ಳಾಪುರ ವತಿಯಿಂದ ಅಹವಾಲು ಸ್ವೀಕಾರ ಸಭೆ ಈ ಸಂದರ್ಭದಲ್ಲಿ ಎಸಿಬಿ ಇನ್ಸ್ಪೆಕ್ಟರ್ ಲಕ್ಷ್ಮೀ ದೇವಮ್ಮ ಮಾತನಾಡಿ, ಸಾರ್ವಜನಿಕರ ಕೆಲಸ ಮಾಡಿಕೊಡಲು ಸರ್ಕಾರಿ ನೌಕರರು ಅಥವಾ ಸಿಬ್ಬಂದಿ ತಾನು ಅಧಿಕೃತವಾಗಿ, ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಲು ವಿಳಂಬ ಅಥವಾ ತಡ ಮಾಡಿದ್ದಲ್ಲಿ, ಸರ್ಕಾರ ನಿಗದಿಪಡಿಸಿದ ಶುಲ್ಕ ಹೂರತುಪಡಿಸಿ ಲಂಚದ ಹಣಕ್ಕಾಗಿ ,ವಸ್ತುವಿನ ರೂಪದಲ್ಲಿ ಒತ್ತಾಯಿಸಿದರೆ ಅಂತಹ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಬಹುದು ಎಂದರು.
ನಂತರ ಎರಡು ದೂರುಗಳನ್ನು ಸಾರ್ವಜನಿಕರು ಸಲ್ಲಿಸಿದ್ದು, ಅದರಲ್ಲಿ ಬಾಬಾಜಾನ್ ಎಂಬುವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಾಗೇಪಲ್ಲಿ ಪಟ್ಟಣದಲ್ಲಿ ಸುಮಾರು 5 ರೂ. ಲಕ್ಷ ವೆಚ್ಚದಲ್ಲಿ ಜನಪರ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಯಾವುದೇ ಪತ್ರಕರ್ತರಿಗೂ ಹಾಗೂ ಸಂಘ- ಸಂಸ್ಥೆಗಳಿಗೆ ಮಾಹಿತಿಯನ್ನು ನೀಡದೇ ಗೌಪ್ಯವಾಗಿ ಮಾಡಿರುವುದರಿಂದ ಹಲವಾರು ಅನುಮಾನಗಳು ಬರುತ್ತಿವೆ ಎಂದರು.
ಇನ್ನು, ಈ ಕಾರ್ಯಕ್ರಮದಲ್ಲಿ ಶಾಲೆ ಮಕ್ಕಳನ್ನು ಹೊರತುಪಡಿಸಿದರೆ ಕೇವಲ 10 ರಿಂದ 20 ಜನರು ಭಾಗವಹಿಸಿದ್ದರಿಂದ ಜನರಿಲ್ಲದ ಜನಪರ ಉತ್ಸವ ಎಂದು ಎಲ್ಲಾ ಪತ್ರಿಕೆಗಳಲ್ಲಿ ಸುದ್ದಿ ಬಂದಿರುವುದನ್ನು ಗಮನಿಸಿದರೆ ಇದರಲ್ಲಿ ಅವ್ಯವಹಾರವಾಗಿದ್ದು, ಸರ್ಕಾರಕ್ಕೆ 5 ಲಕ್ಷ ರೂಪಾಯಿ ದುರುಪಯೋಗವಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ಮಾಡಬೇಕೆಂದು ಎಸಿಬಿ ಇನ್ಸ್ ಪೆಕ್ಟರ್ ಲಕ್ಷ್ಮೀ ದೇವಮ್ಮಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.