ಕರ್ನಾಟಕ

karnataka

ETV Bharat / state

ಸಮ್ಮಿಶ್ರ ಸರ್ಕಾರದ ಪ್ಲಾನ್ ಚಿಕ್ಕಬಳ್ಳಾಪುರದಲ್ಲಿ ಫಲ ಕೊಡುತ್ತಾ... ಜೆಡಿಎಸ್​ ಮುಖಂಡರು ಹೇಳೊದೇನು!? - ಲೋಕಸಭಾ ಚುನಾವಣೆ

ಯಾರು ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ ಯೋಚನೆ ಮಾಡುವ ಶಕ್ತಿ ಜನರಿಗಿದೆ. ಉತ್ತಮ ಕೆಲಸ ಮಾಡುವ ಅಭ್ಯರ್ಥಿಗೆ ಜನರೇ ತಮ್ಮ ಮತವನ್ನು ನೀಡ್ತಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ‌ ಮುನೇಗೌಡ ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ‌ ಮುನೇಗೌಡ

By

Published : Mar 16, 2019, 2:39 PM IST

ಬೆಂಗಳೂರು:ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ‌ ಹೆಚ್ಚು ಕಾವು ಪಡೆದುಕೊಳ್ಳುತ್ತಿದ್ದು, ಸಮ್ಮಿಶ್ರ ಸರ್ಕಾರದ ಪ್ಲಾನ್ ಇಲ್ಲಿ ಉಲ್ಟಾ ಹೊಡೆಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಒಂದು ಕಡೆ ರಾಜ್ಯದ ನಾಯಕರು ತೀರ್ಮಾನ ಮಾಡಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕಾಂಗ್ರೆಸ್ ಅಭ್ಯರ್ಥಿಗೆ ಬಿಟ್ಟುಕೊಟ್ಟಿದ್ದಾರೆ. ಇದರಿಂದ ಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಸಮಾಧಾನ ಉಂಟಾಗಿದೆ. ಇನ್ನು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸಾಧನೆ ಶೂನ್ಯವಾಗಿದ್ದು ಏನು ಮಾನದಂಡ ಇಟ್ಟುಕೊಂಡು ಮತಯಾಚನೆ ಮಾಡಬೇಕು ಅನ್ನೋದು ಇಲ್ಲಿನ ಜೆಡಿಎಸ್ ಕಾರ್ಯಕರ್ತರ ಪ್ರಶ್ನೆಯಾಗಿದೆ.

ಈ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಸಮಾಧಾನ ಇರುವುದನ್ನು ಸ್ವತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಹೊರ ಹಾಕಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಉಳಿದುಕೊಂಡಿದೆ. ಈ ಬಾರಿ ಕೂಡ ಅವರ ಕುಟುಂಬದಲ್ಲಿ ಯಾರಾದರೂ ನಿಂತುಕೊಳ್ಳಬೇಕಿತ್ತು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಈ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ‌ ಮುನೇಗೌಡ

ಜನ ಗೊಂದಲದಲ್ಲಿದ್ದಾರೆ:

ಚುನಾವಣೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಜನರು ಗೊಂದಲದಲ್ಲಿದ್ದಾರೆ. ಇವತ್ತು ನಾವು ಕಾಂಗ್ರೆಸ್​ಗೆ ಏಕೆ‌ ಮತ ಕೊಡಬೇಕು ಅನ್ನೋದು ಜೆಡಿಎಸ್​ನ ಕೆಲ ಜನರ ಮನಸ್ಸಿನಲ್ಲಿದೆ. ಏನೇ ಆಗಲಿ ಜನರನ್ನು ಬದಲಾಯಿಸಿಕೊಳ್ಳುವ ಶಕ್ತಿಯನ್ನು ನಾವು ರೂಡಿಸಿಕೊಳ್ಳಬೇಕು. ಅದೇ ರೀತಿ ನಮ್ಮ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಮತ್ತು ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾಂಗ್ರೆಸ್​ಗೆ​ ಮತ ನೀಡುವಂತೆ ಜೆಡಿಎಸ್ ಕಾರ್ಯಕರ್ತರು ಜನರನ್ನು ಪರಿವರ್ತನೆ ಮಾಡಬೇಕು ಎಂದು ಮುನೇಗೌಡ ತಿಳಿಸಿದರು.

ಕಾಂಗ್ರೆಸ್ ಏನು ಮಾಡಿದೆ ಅನ್ನೋದನ್ನು ಕೇಳೋದು ನಮ್ಮ ಧರ್ಮ:

ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಏನು ಮಾಡಿದ್ದಾರೆ ಅನ್ನೋದನ್ನು ಜನರಿಗೆ ಹೇಳುವುದು ಮತ್ತು ಹೇಳಿಕೊಳ್ಳುವುದು ನಮ್ಮ‌ ಧರ್ಮ. ಆದರೆ ಕಾಂಗ್ರೆಸ್ ನವರು ಏನು ಮಾಡಿದ್ದಾರೆ ಅನ್ನೋದನ್ನು ಕೇಳುವುದು ನಮ್ಮ ಧರ್ಮ ಎಂದರು.

ವೀರಪ್ಪ ಮೊಯ್ಲಿ ಹತ್ತು ವರ್ಷದಲ್ಲಿ ಏನು ಮಾಡಿದ್ದಾರೆ ಅಂತ ಜನರು ಕೇಳುವುದರಲ್ಲಿ ತಪ್ಪೇನಿಲ್ಲ. ಅವರ ವಿರುದ್ದ ನಾವು ಇಷ್ಟು ದಿನ‌ ಹೇಳಿಕೊಂಡು ಬಂದಿರೋದು ನಿಜ. ನಮ್ಮದು ಬರಡು ಭೂಮಿ ಪ್ರದೇಶವಾಗಿದ್ದು, ಎತ್ತಿನ ಹೊಳೆ ಯೋಜನೆ ಮೂಲಕ ನೀರು ಹರಿಸುತ್ತೇನೆ ಎಂದರು ಇನ್ನು ನೀರು ಬಂದಿಲ್ಲ.‌ ಏನು ಹತ್ತು ವರ್ಷಗಳು ಬೇಕಾ ನೀರು ತರುವುದಕ್ಕೆ ಎಂದು ಪ್ರಶ್ನೆ ಮಾಡಿದ್ರು.

ಜನರನ್ನು ಅರ್ಥಮಾಡಿಕೊಳ್ಳುವುದು ಕಷ್ಟ:

ಇವತ್ತು ಜನರು ಯಾವ ರೀತಿ ಇದ್ದಾರೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈಗ ಇರೋದು ಕಾಂಗ್ರೆಸ್ ಮತ್ತು ಬಿಜೆಪಿ. ನಮ್ಮದು ಪ್ರಾದೇಶಿಕ ಪಕ್ಷ. ಇಲ್ಲಿನ ಜನ ಕಾಂಗ್ರೆಸ್ ಮತ್ತು ಬಿಜೆಪಿ ಲೋಕಸಭೆಯಲ್ಲಿ ನಮಗೆ ಏನು ಮಾಡಿದ್ದಾರೆ ಎಂದು ನೋಡುತ್ತಾರೆ. ಅಭಿವೃದ್ಧಿ ಮಾಡಿದ್ದಾರೋ ಅಥವಾ ಇಲ್ಲವಾ... ಯಾರು ಜನರಿಗೆ ಸ್ಪಂದಿಸಿದ್ದಾರೆ ಅನ್ನೋದನ್ನು ನೋಡಿಕೊಂಡು ಮತದಾನ ಮಾಡುತ್ತಾರೆ ಅಂತವರ ಮನಸ್ಸನ್ನು ಪರಿವರ್ತಿಸುವ ಕೆಲಸ ನಾವು ಮಾಡಬೇಕಾಗಿದೆ ಎಂದು ತಿಳಿಸಿದರು.

ಮೋದಿ ಅಲೆಯೋ, ರಾಹುಲ್ ಅಲೆಯೋ... ಜನ ತೀರ್ಮಾನ ಮಾಡ್ತಾರೆ:

ಇಲ್ಲಿ ಮೋದಿ ಅಲೆ ಇದೆಯಾ ಅಥವಾ ರಾಹುಲ್ ಅಲೆ ಇದೆಯಾ ಅನ್ನೋದನ್ನು ಜನರೇ‌‌ ತೀರ್ಮಾನ ಮಾಡ್ತಾರೆ. ಯಾರು ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ ಯೋಚನೆ ಮಾಡುವ ಶಕ್ತಿ ಜನರಿಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ‌ ಮುನೇಗೌಡ ತಿಳಿಸಿದರು.

ABOUT THE AUTHOR

...view details