ಚಿಕ್ಕಬಳ್ಳಾಪುರ/ದಕ್ಷಿಣ ಕನ್ನಡ/ಹಾವೇರಿ: ಏಸು ಕ್ರಿಸ್ತನ ಜನ್ಮದಿನದ ಅನುಸ್ಮರಣೆಯ ದಿನ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.
ಎಲ್ಲಾ ಚರ್ಚ್‌ಗಳಲ್ಲಿ ಕ್ರಿಸ್ಮಸ್ ವಿಶೇಷ ಪ್ರಾರ್ಥನೆ, ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಂಗಳೂರು, ಪುತ್ತೂರು, ಬೆಳ್ತಂಗಡಿ ಧರ್ಮಪ್ರಾಂತ್ಯದ ವಂದನೀಯ ಧರ್ಮಾಧ್ಯಕ್ಷರುಗಳು, ಹಾಗೂ ಆಯಾ ಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ದಿವ್ಯ ಬಲಿಪೂಜೆ ಅರ್ಪಿಸಿ ಹಬ್ಬದ ಸಂದೇಶ ನೀಡಲಾಯಿತು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಚರ್ಚ್‌ಗಳು ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆ ಬಗೆಯ ಚಿತ್ತಾಕರ್ಷಕ ನಕ್ಷತ್ರ ಗೂಡು ದೀಪಗಳು, ವರ್ಣರಂಜಿತ ಗೋದಲಿಗಳಿಂದ ಕಂಗೊಳಿಸುತ್ತಿದ್ದವು.
83 ವರ್ಷಗಳಿಂದ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ನಡೆಸಿಕೊಂಡು ಸಾರ್ವಜನಿಕರಿಗೆ ಉಚಿತ ಊಟವನ್ನು ಬಡಿಸುತ್ತಾ ಬಂದಿರುವ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಕೂಡ ಅದ್ಧೂರಿಯಾಗಿ ಕ್ರಿಸ್ಮಸ್ ಆಚರಣೆ ಮಾಡಲಾಯ್ತು. ಏಸುಕ್ರಿಸ್ತ ಹುಟ್ಟಿ ಬೆಳೆದು ಬಂದ ರೀತಿಯ ಕೊಟ್ಟಿಗೆಯನ್ನು ನಿರ್ಮಿಸಿ ಜನತೆಗೆ ಕ್ರಿಸ್ತನ ಸಂದೇಶ ಸಾರುವಂತೆ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಏಸು ಜನ್ಮದಿನ ಆಚರಿಸಲಾಯಿತು. ಜಿಲ್ಲೆಯ ರಾಣೆಬೆನ್ನೂರಿನ ಮೋಟೆಬೆನ್ನೂರು ಮತ್ತು ಹಾವೇರಿ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ಹಾವೇರಿ ಸೈಂಟ್ ಎನ್ಸ್ ಚರ್ಚ್ ಮತ್ತು ಮೇರಿ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಾಲು ಯೇಸುವಿನ ಮೂರ್ತಿಯನ್ನ ಗೋದಲಿಯಲ್ಲಿ ಹಾಕಿ ಜನ್ಮದಿನಾಚರಣೆ ಆಚರಿಸಲಾಯಿತು. ಚರ್ಚ್‌ಗಳಲ್ಲಿ ಮೊಂಬತ್ತಿ ಹಚ್ಚಿ ಪರಸ್ಪರ ಶುಭಾಶಯ ಹೇಳಲಾಯಿತು. ಪ್ರಾರ್ಥನೆಯ ನಂತರ ಕೇಕ್ ತಿನ್ನಿಸಿ ಪರಸ್ಪರ ಶುಭಾಶಯ ಕೋರುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.