ಚಿಕ್ಕಬಳ್ಳಾಪುರ :ಕೊರೊನಾ ಸೋಂಕು ತೊಲಗಲು ಶ್ರಾವಣ ಮಾಸ ಶನಿವಾರದಂದು ಹನುಮ ಭಕ್ತರು ಜಿಲ್ಲೆಯ ಚಿಂತಾಮಣಿಯ ಪ್ರಸಿದ್ಧ ಅಂಬಾಜೀ ಬೆಟ್ಟದ ಆಂಜನೇಯನಿಗೆ ವಿಶೇಷ ಪೂಜೆ ನಡೆಸಿದರು.
ಶ್ರಾವಣ ಶನಿವಾರ, ಕೊರೊನಾ ತೊಲಗಿಸಲು ಹನುಮನ ಮೊರೆ ಹೋದ ಚಿಂತಾಮಣಿ ಜನತೆ ಶ್ರಾವಣ ಶನಿವಾರದಂದು ಜಿಲ್ಲೆಯ ಸಾಕಷ್ಟು ದೇಗುಲಗಳಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ. ಈ ಬಾರಿ ಕೊರೊನಾ ಸೋಂಕು ಹಿನ್ನಲೆ ಸಾಕಷ್ಟು ದೇಗುಲಗಳಲ್ಲಿ ಸರಳವಾಗಿ ಪೂಜೆಗಳನ್ನು ಆಚರಿಸಲಾಗುತ್ತಿದೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜೀದುರ್ಗಾ ಬೆಟ್ಟದ ಹನುಮನಿಗೆ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು.
ಉದ್ಬವ ಮೂರ್ತಿಯಾಗಿ ಕನಸಿನಲ್ಲಿ ಬಂದ ಹನುಮ ತಾನಿರುವ ದಾರಿಯನ್ನು ತೋರಿಸಿ ಸಾಕಷ್ಟು ಪವಾಡಗಳನ್ನು ಸೃಷ್ಟಿ ಮಾಡುತ್ತಿದ್ದಾನಂತೆ. ಇಲ್ಲಿಗೆ ಜಿಲ್ಲೆಯ ಜನತೆ ಸೇರಿದಂತೆ ನೆರೆ ರಾಜ್ಯ ಆಂಧ್ರದಿಂದಲೂ ಭಕ್ತರು ಬಂದು ಹನುಮಂತನ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಅಂಬಾಜೀ ದುರ್ಗಾದ ಬೆಟ್ಟದ ಮೇಲಿನ ಸೀತಾ ಮಾತೆ ನಿರ್ಮಿಸಿದ ಗುಂಡಿಯಲ್ಲಿನ ನೀರನ್ನು ಕುಡಿದರೆ ಸರ್ವ ರೋಗಗಳು ನಿವಾರಣೆಯಾಗುತ್ತದೆ ಎಂಬುದು ಇಲ್ಲಿನ ನಂಬಿಕೆ.
ಇದರ ಸಲುವಾಗಿಯೇ ಕನಸಿನಲ್ಲಿ ಬಂದ ಹನುಮನಿಗೆ ದಾರಿ ಮಾಡಿದ ಭಕ್ತ ನಾರಾಯಣಸ್ವಾಮಿ ತಮ್ಮ ವಾಹನದಲ್ಲಿ ಉಚಿತವಾಗಿ ಭಕ್ತರನ್ನು ಕರೆತಂದು ದೇವರ ದರ್ಶನವನ್ನು ಮಾಡಿಸುತ್ತಾರೆ. 10 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು, ಪೋಷಿಸಿ ಪರಿಸರ ಪ್ರೇಮಿಯಾಗಿ ಹೆಸರುವಾಸಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ, ನಿತ್ಯ ಭೋಜನ ಸೇರಿ ಪ್ರಸಾದವನ್ನು ತಮ್ಮ ಸ್ವಂತ ಹಣದಿಂದಲೇ ನೀಡುತ್ತಿದ್ದಾರೆ.
ಸದ್ಯ ಮೂರು ಗೋವುಗಳನ್ನು ಪೋಷಿಸುತ್ತಿದ್ದು, ಇನ್ನೂ ಹಲವು ಗೋವುಗಳ ಪೋಷಣೆಗೆ ಮುಂದಾಗುತ್ತಿದ್ದಾರೆ. ಸದ್ಯ ಇಂದು ಹನುಮನ ದೇಗುಲ ಸೇರಿದಂತೆ ಜಿಲ್ಲೆಯ ಹಲವು ದೇಗುಲಗಳಲ್ಲಿ ಕೊರೊನಾ ಸೊಂಕು ತೊಲುಗಲು ವಿಶೇಷ ಪೂಜೆ ಏರ್ಪಡಿಸಲಾಗಿತ್ತು.