ಚಿಕ್ಕಬಳ್ಳಾಪುರ:ಲೋಕಸಭಾ ಚುನಾವಣೆಯ ಬಳಿಕ ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದಾಗಿ ತಿಳಿಸಿದ್ದ ಉಪ ಸಭಾಧ್ಯಕ್ಷ ಹಾಗೂ ಚಿಂತಾಮಣಿ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಈಗ ಯೂ ಟರ್ನ್ ಹೊಡೆದಿದ್ದು, ಹೈಕಮಾಂಡ್ ತೀರ್ಮಾನಕ್ಕೆ ತಲೆ ಬಾಗುವುದಾಗಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯ ಬಳಿಕ ಮೈತ್ರಿ ಸರ್ಕಾರ ರಚಿಸಿದ್ದೇ ತಡ ಸಚಿವ ಸ್ಥಾನದ ಆಕಾಂಕ್ಷಿಗಳು ಒಬ್ಬೊಬ್ಬರಾಗಿ ಹೊರಬಂದರು. ಅದರಲ್ಲಿ ಹಾಲಿ ಉಪ ಸಭಾಧ್ಯಕ್ಷರಾದ ಜೆ.ಕೆ.ಕೃಷ್ಣಾರೆಡ್ಡಿಯೂ ಸಹ ಒಬ್ಬರಾಗಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿಗೆ ಮಾತ್ರ ಸಚಿವ ಸ್ಥಾನ ದೊರಕಿದೆ. ಜೆ.ಕೆ.ಕೃಷ್ಣಾರೆಡ್ಡಿಗೆ ಉಪ ಸಭಾಧ್ಯಕ್ಷರ ಸ್ಥಾನ ನೀಡಿ ಸಮಾಧಾನ ಪಡಿಸಿದ್ದರು.
ಆದರೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ. ಕೆ.ಸುಧಾಕರ್, ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ನನಗೊಂದು ಸ್ಥಾನವನ್ನು ನೀಡಿ ಎಂಬತೆ ಸಾಕಷ್ಟು ಬಾರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ರೀತಿ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಯೂ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಅವರಿಗೆ ನಿಗಮ ಮಂಡಳಿಯ ಸ್ಥಾನವನ್ನು ನೀಡಿ ಸಮಾಧಾನ ಪಡಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ರೇಷ್ಮೆ ನಿಗಮ ಮಂಡಳಿಗೆ ರಾಜೀನಾಮೆ ಕೊಡುವುದಾಗಿ ಹೇಳಿಕೆ ನೀಡಿ ಬೇರೊಂದು ನಿಗಮ ಮಂಡಳಿಯನ್ನು ನೀಡುವಂತೆ ಒತ್ತಾಯ ಸಹ ಮಾಡಿದ್ದರು.
ಇತ್ತ ಸೈಲೆಂಟ್ ಆಗಿದ್ದ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ನಾನು ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿ. ನನಗೆ ಸಚಿವ ಸ್ಥಾನ ನೀಡಿ ಎಂದು ಹೈಕಮಾಂಡ್ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈಗ ಎಲ್ಲಾ ನಶಿಸಿ ಹೋಗಿದೆ ಎಂಬ ಹೇಳಿಕೆಯನ್ನು ನೀಡಿ ದೊಡ್ಡಮಟ್ಟದ ಚರ್ಚೆಗೆ ಕಾರಣರಾದರು.
ಆದರೆ ಉಪ ಸಭಾಧ್ಯಕ್ಷರು ಲೋಕಸಭಾ ಫಲಿತಾಂಶದ ಬಳಿಕ ಬೇಡಿಕೆ ಇಡುವುದಾಗಿ ತಿಳಿಸಿದ್ದು, ಈಗ ಹೈಕಮಾಂಡ್ ಉಪ ಸಭಾಧ್ಯಕ್ಷರ ಸ್ಥಾನದಲ್ಲಿಯೇ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಇದರಲ್ಲಿಯೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಸದ್ಯ ಸಮ್ಮಿಶ್ರ ಸರ್ಕಾರ ಆಪರೇಷನ್ ಕಮಲದ ಭೀತಿಯಲ್ಲಿದ್ದು, ಎಲ್ಲಿ ಸರ್ಕಾರ ಉರುಳುತ್ತೋ ಎಂಬ ಭಯ ಸಾಕಷ್ಟಿತ್ತು. ಆದರೆ ಈಗ ಶಾಸಕರ ಸಚಿವ ಸ್ಥಾನದ ಬೇಡಿಕೆಗಳಿಗೆ ಸಮ್ಮಿಶ್ರ ಸರ್ಕಾರ ಯಾವ ನಿರ್ಧಾರಗಳನ್ನು ಕೈಗೊಳ್ಳುತ್ತೋ ಕಾದು ನೋಡಬೇಕಾಗಿದೆ.