ಚಿಕ್ಕಬಳ್ಳಾಪುರ :ಜಿಲ್ಲೆಯ ಗ್ರಾಮವೊಂದು ಕುಡುಕರ ಅಡ್ಡೆಯಾಗಿದೆ. ಸರ್ಕಾರಿ ಶಾಲೆಯನ್ನು ಬಿಡದೆ ಕುಡುಕರು ಎಂಜಾಯ್ ಮಾಡುತ್ತಿದ್ದು, ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಂತಲಪಲ್ಲಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಮುಂಭಾಗವೇ ಕುಡುಕರ ಹಾವಳಿ.. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಚಿಂತಲಪಲ್ಲಿ ಗ್ರಾಮವು ಸಂಗೀತಗಾರರ ಗ್ರಾಮವೆಂದು ಪ್ರಖ್ಯಾತಿ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಪ್ರಪಂಚದಲ್ಲೇ ಅತ್ಯಂತ ಹಳೆಯದಾದ ಸಂಗೀತಗಾರರ ವಂಶಸ್ಥರು ನೆಲೆಸಿರುವ ಸ್ಥಳವೆಂದು ಖ್ಯಾತಿ ಪಡೆದಿದೆ.
ಇಲ್ಲಿನ ಸಂಗೀತಗಾರರು ಮೈಸೂರು ಮಹಾರಾಜರ ಆಸ್ಥಾನದ ವಿದ್ವಾಂಸರಾಗಿಯೂ ಸೇವೆ ಸಲ್ಲಿಸಿದ್ದು, ಈಗಲೂ ರಾಜ್ಯದ ಹಲವು ಕಡೆ ಸಂಗೀತದ ಶಾಲೆಗಳನ್ನು ನಡೆಸುತ್ತಿದ್ದಾರೆ. ಆದರೆ, ಇಷ್ಟು ಖ್ಯಾತಿ ಪಡೆದ ಈ ಗ್ರಾಮವೂ ಇಂದು ಅತೀ ಹೆಚ್ಚು ಮದ್ಯ ಮಾರಾಟವಾಗುವ ಗ್ರಾಮ ಎಂದು ಹೆಸರುವಾಸಿಯಾಗುತ್ತಿದೆ.
ಸರ್ಕಾರಿ ಶಾಲೆಯ ಮುಂಭಾಗವೇ ಈಗ ಕುಡುಕರಿಗೆ ಬಾರ್ ಅಂಡ್ ರೆಸ್ಟೋರೆಂಟ್ ಆದಂತಾಗಿದೆ. ಕುಡುಕರು ತಮ್ಮ ದರ್ಬಾರ್ ನಡೆಸುವಂತಾಗಿದೆ. ಇನ್ನೂ ಆಂಧ್ರದ ಗಡಿಯಲ್ಲಿ ಈ ಗ್ರಾಮವಿರುವುದರಿಂದ ಬಹುತೇಕ ಜನ ನೆರೆ ರಾಜ್ಯ ಆಂಧ್ರಪ್ರದೇಶದಿಂದ ಬರುವವರ ಸಂಖ್ಯೆಯೇ ಹೆಚ್ಚಾಗಿದೆ.
ಸದ್ಯ ಕೊರೊನಾ ಸೋಂಕು ಜಿಲ್ಲೆಯಲ್ಲಿ ಅಟ್ಟಹಾಸ ನಡೆಸುತ್ತಿದೆ. ನೆರೆ ರಾಜ್ಯಗಳಿಂದ ಸೋಂಕು ಉಲ್ಬಣಗೊಂಡಿದೆ. ಇದರ ಸಲುವಾಗಿಯೇ ಹೊರ ರಾಜ್ಯಗಳಿಂದ ಬರುವ ಜನರನ್ನು ತಡೆಯಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸಾಕಷ್ಟು ಕಸರತ್ತು ನಡೆಸುತ್ತಿದೆ. ಆದರೆ, ನೆರೆ ರಾಜ್ಯದಿಂದ ಇಲ್ಲಿಗೆ ಬರುವ ಕುಡುಕರ ಸಂಖ್ಯೆಯೇ ಹೆಚ್ಚಾಗಿದ್ದು, ಜಿಲ್ಲಾಡಳಿತದ ವೈಫಲ್ಯವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಗಡಿ ಭಾಗದಲ್ಲಿರುವ ಬಹುತೇಕ ಬಾರ್‌ಗಳು ರಾಜಕಾರಣಿಗಳ ಸಂಬಂಧಿಕರದ್ದೇ ಆಗಿದ್ದು, ಇದರಿಂದ ದಿನದ 24 ಗಂಟೆಯೂ ಮದ್ಯ ಸಿಗುವಂತಾಗಿದೆ. ಸದ್ಯ ಚಿಂತಲಪಲ್ಲಿ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮಕ್ಕಿರುವ ಹೆಸರಿಗೆ ಮಸಿ ಬಳಿಸಿದಂತಾಗಿದೆ. ಈಗಾಲಾದ್ರೂ ಜಿಲ್ಲಾಡಳಿತ ಎಚ್ಚೆತ್ತು ಚಿಂತಲಪಲ್ಲಿ ಗ್ರಾಮದ ಸಮಸ್ಯೆಯನ್ನು ಬಗೆಹರಿಸುತ್ತೋ ಇಲ್ಲವೋ ಕಾದು ನೋಡಬೇಕಾಗಿದೆ.