ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ ಆಗಿದೆ. ಇಂದು ಮುಂಜಾನೆ ತಾಲೂಕಿನ ಚಿತ್ರಾವತಿ ಬಳಿಯ ಆರ್ಟಿಒ ಕಚೇರಿ ಸಮೀಪ ಹೆದ್ದಾರಿ ಬದಿ ನಿಂತಿದ್ದ ಸಿಮೆಂಟ್ ಬಲ್ಕರ್ ಲಾರಿಗೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೊ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಸ್ಥಳದಲ್ಲೇ 12 ಮಂದಿ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತರಲ್ಲಿ 8 ಜನ ಪುರುಷರು, 4 ಮಹಿಳೆಯರು, ಒಂದು ಮಗು ಸಾವನ್ನಪ್ಪಿದೆ. ಮೃತರೆಲ್ಲರೂ ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಗೋರಂಟ್ಲ ಗ್ರಾಮದವರು ಎಂದು ಹೇಳಲಾಗಿದೆ.
ಮೃತರನ್ನು ಆಂಧ್ರಪ್ರದೇಶದ ಕೊತ್ತಚೆರವು ಗ್ರಾಮದ ಪೆರಿಮಿಲಿ ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಬ್ಬಮ್ಮ, ದೊಡ್ಡಬಳ್ಳಾಪುರದ ಅರುಣಾ ಎಂಬವರ ಗುರುತು ಪತ್ತೆ ಹಚ್ಚಲಾಗಿದೆ. ಉಳಿದವರ ಗುರುತು ಇನ್ನೂ ಕಲೆ ಹಾಕಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಅವರು, ಚಿಕ್ಕಬಳ್ಳಾಪುರ ಆರ್ಟಿಓ ಕಚೇರಿ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 13 ಜನ ಸಾವನ್ನಪ್ಪಿದ್ದಾರೆ. 8 ಮಂದಿ ಗಂಡಸರು, 4 ಹೆಂಗಸರು ಮತ್ತು ಒಂದು ಮಗು ಮೃತಪಟ್ಟಿದೆ. ಮೃತರೆಲ್ಲರೂ ಆಂಧ್ರ ಪ್ರದೇಶದ ಗೊರಂಟ್ಲಪಲ್ಲಿಯವರು ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ಗೊರಂಟ್ಲಪಲ್ಲಿಯಿಂದ ಟಾಟಾ ಸುಮೊದಲ್ಲಿ ಪ್ರಯಾಣಿಕರು ಹೊರಟಿದ್ದರು. ಈ ವೇಳೆ, ಚಿಕ್ಕಬಳ್ಳಾಪುರದ ಚಿತ್ರಾವತಿ ಬಳಿ ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಟಾಟಾ ಸುಮೊ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸ್ಥಳದಲ್ಲೇ ಹಲವರು ಮೃತಪಟ್ಟಿದ್ದಾರೆ. ನಾನು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.