ಚಿಕ್ಕಬಳ್ಳಾಪುರ : ಇದೇ ತಿಂಗಳ 15 & 16ರಂದು ನಡೆಯುವ 11 ಜಿಲ್ಲೆಗಳ ವಿಭಾಗ ಮಟ್ಟದ ಕಬಡ್ಡಿ ಕ್ರೀಡಾಕೂಟ ಯಶಸ್ವಿಯಾಗಲು ಎಲ್ಲಾ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಭಾಗ ಮಟ್ಟದ ಕ್ರೀಡಾಕೂಟವೆಂದರೆ ಅದು ರಾಜ್ಯ ಮಟ್ಟದ ಕ್ರೀಡಾಕೂಟವಿದ್ದಂತೆ. ಸುಮಾರು 11 ಜಿಲ್ಲೆಗಳಿಂದ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ 44 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಈ ಪಂದ್ಯಾವಳಿಯು ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯಿರುವ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುಮಾರು 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ರು.
ವಿಭಾಗ ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆ ಎಲ್ಲಾ ಕ್ರೀಡಾಪಟುಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಸತಿ ವ್ಯವಸ್ಥೆ ಏರ್ಪಡಿಸಲಾಗಿದೆ. ತರಬೇತುದಾರರು, ವ್ಯವಸ್ಥಾಪಕರಿಗೆ ಗಾಯತ್ರಿ ಪ್ರಸಾದ ಭವನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ನಮ್ಮ ಗುಡಿಬಂಡೆ ತಾಲ್ಲೂಕಿಗೆ ಪ್ರತಿಷ್ಟೆಯಾಗಿದ್ದು, ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ ಇಲಾಖೆಯ ನೌಕರರು, ಜನಪ್ರತಿನಿಧಿಗಳು, ಸಾರ್ವಜನಿಕರು, ಎಲ್ಲಾ ಕ್ರೀಡಾಪಟುಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಾಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಅಮಾನಿಬೈರ ಸಾಗರ ಕೆರೆಯ ಬಳಿ ಜಾಗ ಸೂಚಿಸಲಾಗಿದೆ. ಆ ಜಾಗ ಸೇಂದಿ ವನ ಎಂದು ಹೇಳಲಾಗಿದ್ದು, ಅಬಕಾರಿ ಇಲಾಖೆಯವರಿಂದ ಎನ್.ಒ.ಸಿ ಪಡೆಯಬೇಕಿದೆ. ಜೊತೆಗೆ ಕ್ಯಾಬಿನೆಟ್‍ನಲ್ಲಿ ಅನುಮೋದನೆ ಪಡೆಯಬೇಕಿರುವುದರಿಂದ ತಡವಾಗುತ್ತಿದ್ದು, ಆದಷ್ಟು ಶೀಘ್ರವಾಗಿ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗೇಶ್, ವಿಭಾಗ ಮಟ್ಟದ ಕ್ರೀಡಾಕೂಟಗಳನ್ನು ಒಂದೊಂದು ಬಾರಿ ಒಂದೊಂದು ಜಿಲ್ಲೆಗೆ ನೀಡುವ ಅವಕಾಶವಿದೆ. ಈ ಸಾಲಿನಲ್ಲಿ ಚಿಕ್ಕಬಳ್ಳಾಫುರ ಜಿಲ್ಲೆಗೆ ಅವಕಾಶ ಬಂದಿದ್ದು, ಥ್ರೋಬಾಲ್ ಕ್ರೀಡಾಕೂಟ ಬಾಗೆಪಲ್ಲಿಯಲ್ಲಿ ಹಾಗೂ ಕಬಡ್ಡಿ ಕ್ರೀಡಾಕೂಟ ಗುಡಿಬಂಡೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.