ಚಿಕ್ಕಬಳ್ಳಾಪುರ :ಕೊರೊನಾ ನಿಯಂತ್ರಿಸಲು ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊರೊನಾದ ನಡುವೆ ಬಿಜೆಪಿ ಸರ್ಕಾರ ಹಣವನ್ನು ಲೂಟಿ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ವೈಫಲ್ಯದ ಕುರಿತು ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಟಿಬಿ ಜಯಚಂದ್ರ, ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ಕಮಲ ಪಡೆಯ ವಿರುದ್ಧ ಹರಿಹಾಯ್ದರು.
ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡಲು ಬಿಜೆಪಿ ಸರ್ಕಾರ ವಿಫಲವಾಗಿದೆ ಮಾಜಿ ಸಚಿವ ಟಿಬಿ ಜಯಚಂದ್ರ ಅವರು ಮಾತನಾಡಿ, ಪ್ರಧಾನಿ 20 ಲಕ್ಷ ಕೋಟಿ ಪ್ಯಾಕೇಜ್ ಹೇಳಿದ್ರು, ಅದು ಎಲ್ಲಿ ಹೋಗಿದೆ. ನಮ್ಮ ರಾಜ್ಯದಿಂದ ಆಯ್ಕೆಯಾದ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ನಮ್ಮ ರಾಜ್ಯಕ್ಕೆ ಎಷ್ಟು ಕೋಟಿ ಕೊಟ್ಟಿದ್ದಾರೆ. 15 ಲಕ್ಷ ಕೋಟಿ ಚೀನಾದಿಂದ ಪಿಎಂ ಕೇರ್ಸ್‌ಗೆ ಬಂದಿದೆ. ಪ್ರಧಾನಮಂತ್ರಿ ಪ್ರಾಮಾಣಿಕವಾಗಿದ್ರೆ ಶ್ವೇತ ಪತ್ರ ಹೊರಡಿಸಲಿ. ಅಷ್ಟು ದೊಡ್ಡ ಪ್ರಮಾಣದಲ್ಲಿ ನಮ್ಮ ರಾಜ್ಯಕ್ಕೆ ಎಷ್ಟು ವ್ಯಯಿಸಲಾಗಿದೆ ಎಲ್ಲದಕ್ಕೂ ಲೆಕ್ಕ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೆಕ್ಕದ ಬಗ್ಗೆ ಕೇಳಿದ್ರೆ ನಮಗೆ ನೋಟಿಸ್ ಕೊಟ್ಟಿದ್ದಾರೆ. ಇದನ್ನು ನೋಡಿದ್ರೆ ಪರೋಕ್ಷವಾಗಿ ಅವ್ಯವಹಾರ ಮಾಡಿದಂತೆ ಒಪ್ಪಿಕೊಂಡಂತಾಗಿದೆ. ಇದರ ಸಲುವಾಗಿಯೇ ಕಾಂಗ್ರೆಸ್ ಪಕ್ಷದ ನಾಯಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ಸಿದ್ದರಾಗಿದ್ದೇವೆ. ಅದೇ ರೀತಿ ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಭಾ ಸದಸ್ಯ ನಾಸೀರ್ ಹುಸೀನ್ ಮಾತನಾಡಿ, ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಪ್ರಪಂಚದಲ್ಲಿ 74 ನೇ ಸ್ಥಾನದಲ್ಲಿತ್ತು. ಈಗ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ 4ನೇ ಸ್ಥಾನಕ್ಕೆ ಏರಿದೆ. ಕೊರೊನಾ ಸೋಂಕಿನ ತಡೆಗೆ ಕ್ರಮಕೈಗೊಳ್ಳಲು ಸರ್ಕಾರಗಳು ವಿಫಲವಾಗಿವೆ. ಇದಕ್ಕೆ ಕಾರಣ ಉಸ್ತುವಾರಿ ಸಚಿವರಲ್ಲೇ ಕಿತ್ತಾಟವಾಗಿದೆ ಎಂದರು.
ಇದೇ ವೇಳೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಿಗೆ ಆಪರೇಷನ್ ಕಮಲದಿಂದ ಸಿಕ್ಕ ಹಣ ಸಾಕಾಗಿಲ್ಲ. ಕೊರೊನಾದಲ್ಲೂ ಹಣ ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು. ಚೈನೀಸ್ ಕಂಪನಿಗಳಿಂದ ಪಿಎಂ ಕೇರ್ಸ್‌ಗೆ ಬಂದ 30 ಸಾವಿರ ಕೋಟಿ ಹಣ ಎಲ್ಲಿ ಹೋಯ್ತು?, ಆ ಹಣವನ್ನು ಶಾಸಕರ ಕುದುರೆ ವ್ಯಾಪಾರಕ್ಕೆ ಬಳಸಲಾಗ್ತಿದ್ಯಾ ಎಂದು ಪ್ರಶ್ನಿಸಿದರು. ಇನ್ನೂ ಇದರ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿಸಿದ್ದಾರೆ. ಇದನ್ನು ತಪ್ಪಿಸಲು ಈಗ ರಾಮ ಮಂದಿರ ಕಟ್ಟಲು ಹೊರಟಿದ್ದಾರೆ. ರಾಮ ಮಂದಿರ ಮಾಡ್ಲಿ ನಾವು ಹೊಗ್ತೇವೆ ಆದರೆ, ಈಗ ಅದು ಬೇಕಿತ್ತಾ ಎಂದು ಕೇಂದ್ರ, ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದ್ರು.