ಉಚಿತ ನಿವೇಶನ ಮತ್ತು ಆಹಾರ ಪದಾರ್ಥಗಳ ವಿತರಣೆಗೆ ಹಮಾಲಿ ಸಂಘದ ಒತ್ತಾಯ - ಹಮಾಲರ ಪ್ರತಿಭಟನೆ
ಬಾಗೇಪಲ್ಲಿಯಲ್ಲಿ ಹಮಾಲರಿಗೆ ಉಚಿತ ನಿವೇಶನ, ಮನೆ ಮತ್ತು ಆಹಾರ ಸಾಮಗ್ರಿಗಳನ್ನು ನೀಡುವಂತೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರ್ನಾಟಕ ಹಮಾಲಿ ಕಾರ್ಮಿಕರ ಫೆಡರೇಶನ್ ವತಿಯಿಂದ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಬಾಗೇಪಲ್ಲಿ: ಹಮಾಲರಿಗೆ ಉಚಿತ ಮನೆ, ನಿವೇಶನ ಹಾಗೂ ಆಹಾರ ಪದಾರ್ಥಗಳನ್ನು ನೀಡುವಂತೆ ಒತ್ತಾಯಿಸಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರ್ನಾಟಕ ಹಮಾಲಿ ಕಾರ್ಮಿಕರ ಫೆಡರೇಶನ್ ವತಿಯಿಂದ ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷ ಮಾಂತೇಶ್ ಮಾತನಾಡಿ, ಮಾರುಕಟ್ಟೆಯಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಕಷ್ಟಪಟ್ಟು ದುಡಿಯುವ ಹಮಾಲರಿಗೆ ಸ್ವಂತ ಮನೆಗಳು ಇಲ್ಲ. ಹೀಗಾಗಿ ಮನೆಗಳಿಲ್ಲದೆ ಕುಟುಂಬ ಪೋಷಣೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಲು ಸಾಧ್ಯವಾಗದೆ ಮಕ್ಕಳು ಸಹ ಹಮಾಲಿ ಕೆಲಸ ಮುಂದುವರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಲಾಕ್ ಡೌನ್ ನಂತಹ ತುರ್ತು ಪರಿಸ್ಥಿತಿಯಲ್ಲಿ ಹಮಾಲಿಗಳಿಗೆ ದುಡಿಯಲು ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಸರ್ಕಾರವು ಹಮಾಲಿಗಳಿಗೆ ಉಚಿತ ನಿವೇಶನ, ಸಕಾಲಕ್ಕೆ ಪಿಂಚಣಿ ಹಾಗೂ ಪ್ರೋತ್ಸಾಹಧನ ನೀಡುವಂತೆ ಒತ್ತಾಯಿಸಿದರು.