ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದ ಕೈಮಗ್ಗ ನೇಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆ

ರೇಷ್ಮೆ ಸೀರೆ ನೇಯ್ಗೆಯಲ್ಲಿ ಗಮನ ಸೆಳೆದಿರುವ ಚಿಕ್ಕಬಳ್ಳಾಪುರ ಜಿಲ್ಲೆ ಬೋಯಿಪಲ್ಲಿ ಗ್ರಾಮದ ಕೈಮಗ್ಗ ನೇಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

State Award for Weaver
ಚಿಕ್ಕಬಳ್ಳಾಪುರದ ಕೈಮಗ್ಗ ನೇಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆ

By

Published : Aug 8, 2021, 8:14 AM IST

ಚಿಕ್ಕಬಳ್ಳಾಪುರ : ಕೈ ಮಗ್ಗದಲ್ಲಿ ಅಪ್ಪಟ 'ರೇಷ್ಮೆ ಎಂಬೋಜ್ ಬ್ರೋಕೇಡ್ ಕುಟ್ಟು ಸೀರೆ'ಯನ್ನು ವಿಶಿಷ್ಟ ಮತ್ತು ವಿಭಿನ್ನ ವಿನ್ಯಾಸದಲ್ಲಿ ನೇಯ್ಗೆ ಮಾಡುವ ಮೂಲಕ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಬೋಯಿಪಲ್ಲಿ ಗ್ರಾಮದ ಕೈ ಮಗ್ಗ ನೇಕಾರರೊಬ್ಬರು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಇವರನ್ನು ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ 2021-22 ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಬಾಗೇಪಲ್ಲಿ ತಾಲೂಕು ಬಿಳ್ಳೂರು ಅಂಚೆ ವ್ಯಾಪ್ತಿಯ 44 ವರ್ಷ ವೆಂಕಟರವಣ ಅವರು ಕಳೆದ 20 ವರ್ಷಗಳಿಂದ ಕೈ ಮಗ್ಗ ನೇಯ್ಗೆಯಲ್ಲಿ ತೊಡಗಿಕೊಂಡಿದ್ದಾರೆ. ಕೈ ಮಗ್ಗದ ಮೂಲಕ ರೇಷ್ಮೆ ಸೀರೆಗಳನ್ನು ವರ್ಣರಂಜಿತ ವಿನ್ಯಾಸ ಮತ್ತು ವಿಭಿನ್ನ ಶೈಲಿಯಲ್ಲಿ ನೇಯ್ಗೆ ಮಾಡುವ ಕೌಶಲ್ಯ ಕರಗತ ಮಾಡಿಕೊಂಡಿದ್ದಾರೆ. ಅಲ್ಲದೆ ಈ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ವೆಂಕಟರವಣ ಅವರು, ಜಿಲ್ಲೆಯ ಇತರ ನೇಕಾರರಿಗೆ ಮಾದರಿಯಾಗಿದ್ದಾರೆ.

ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ ನೇಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆ

ಸುಮಾರು 20 ಸಾವಿರ ರೂಪಾಯಿ ಬೆಲೆ ಬಾಳುವ ಶುದ್ಧ ರೇಷ್ಮೆ ಸೀರೆಯನ್ನು ಕೈಮಗ್ಗದಲ್ಲಿ ನೇಯ್ಗೆ ಮಾಡಲು 10 ದಿನಗಳ ಅವಧಿ ಬೇಕಾಗುತ್ತದೆ. ಆಂಧ್ರದ ಧರ್ಮಾವರಂನಿಂದ ರೇಷ್ಮೆ ಸೀರೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಖರೀದಿಸುವ ವೆಂಕಟರವಣ ಅವರು, ಧರ್ಮಾವರಂ, ಬೆಂಗಳೂರು ನಗರಗಳನ್ನು ತಮ್ಮ ಉತ್ಪನ್ನದ ಮಾರಾಟ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ.

ಈ ಹಿಂದೆಯೂ ನೇಕಾರ ವೆಂಕಟರವಣ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು

ಪ್ರಶಸ್ತಿ ಪ್ರದಾನ ಮುಂದೂಡಿಕೆ :

ವೆಂಕಟರವಣ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಿದೆ. ಈ ಪ್ರಶಸ್ತಿ 25 ಸಾವಿರ ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ. ಆಗಸ್ಟ್ 7 ರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದು ಬೆಂಗಳೂರಿನ ವಿಕಾಸೌಧದಲ್ಲಿ ನಿಗದಿಯಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ ಆಗಿದೆ. ಮುಂದಿನ ದಿನಾಂಕ ಪ್ರಕಟಗೊಳ್ಳಬೇಕಿದೆ.

ಜಿಲ್ಲಾಧಿಕಾರಿ ಶ್ಲಾಘನೆ :

ವಿಶಿಷ್ಟ ವಿನ್ಯಾಸದ ಶುದ್ಧ ರೇಷ್ಮೆ ಸೀರೆಯನ್ನು ಕೈಮಗ್ಗದಲ್ಲಿ ನೇಯ್ಗೆ ಮಾಡುವ ಮೂಲಕ ಗಮನಸೆಳೆದಿರುವ ವೆಂಕಟರವಣ ಅವರ ಸಾಧನೆಯನ್ನು ಜಿಲ್ಲಾಧಿಕಾರಿ ಆರ್.ಲತಾ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details