ಚಿಕ್ಕಬಳ್ಳಾಪುರ: ಮುಂಬರುವ ಫೆ. 8 ಮತ್ತು 9 ರಂದು ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆ ಪ್ರಯುಕ್ತ ಇಂದು ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ನಮ್ಮ ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಪಂಗಂಡ ಸಮುದಾಯವಿದೆ. ಆದರೆ, ಸಮುದಾಯದ ಅನೇಕರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈಗಾಗಲೇ ಯಡಿಯೂರಪ್ಪ ಸರ್ಕಾರ ವಾಲ್ಮೀಕಿ ಸಮಾಜದ ಮೀಸಲಿಗೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ ಸಮಿತಿ ರಚಿಸಿದ್ದಾರೆ. ಮುಖ್ಯಮಂತ್ರಿಗಳು ಸಮಿತಿಯಿಂದ ವರದಿ ತರಿಸಿಕೊಂಡು ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆಯಂದೇ ಮೀಸಲು ಘೋಷಣೆ ಮಾಡಬೇಕು. ವಿಳಂಬ ಮಾಡಿದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದರು.
ಕಳೆದ ವರ್ಷ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಸಮುದಾಯದಿಂದ ಸುಮಾರು 3 ಕೋಟಿಯಷ್ಟು ದೇಣಿಗೆ ಬಂದಿದ್ದು, ಜಾತ್ರೆಗೆ ಒಂದೂವರೆ ಕೋಟಿಯಷ್ಟು ಖರ್ಚಾಗಿತ್ತು. ಉಳಿದ ಹಣವನ್ನು ಯಾದಗಿರಿ ಜಿಲ್ಲೆಯಲ್ಲಿ ಸುಮಾರು 17 ಎಕರೆ ಪ್ರದೇಶವನ್ನು ವಾಲ್ಮೀಕಿ ಪೀಠದ ಹೆಸರಿನಲ್ಲಿ ಖರೀದಿ ಮಾಡಲಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗಗಳ ಜಿಲ್ಲೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಲ್ಮೀಕಿ ಗುರಪೀಠದ ಶಾಖಾ ಮಠ ತೆರೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು.
ನಕಲಿ ಜಾತಿ ಪ್ರಮಾಣ ಪತ್ರ ಪಡೆದವರಿಗೆ ಶಿಕ್ಷೆ ಆಗಲಿ:ರಾಜ್ಯದಲ್ಲಿ ಅನೇಕರು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಉನ್ನತ ಹುದ್ದೆಗಳನ್ನು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹಣಕ್ಕೆ ಆಸೆ ಬಿದ್ದು ಅಧಿಕಾರಿಗಳು ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ. ಹೀಗಾಗಿ ವಾಲ್ಮೀಕಿ ಸಮುದಾಯದ ಅರ್ಹರಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರ ನಕಲಿ ಪ್ರಮಾಣ ಪತ್ರಗಳನ್ನು ಪಡೆದಿರುವ ಹಾಗೂ ವಿತರಣೆ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.