ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ವಲಸೇನಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಗಂಭೀರ ಸಮಸ್ಯೆಯೊಂದು ಉದ್ಭವಿಸಿದೆ. ಈ ಹಿಂದೆ ಇದ್ದ ಶಿಕ್ಷಕಿ ಮಂಜುಳ ಸಾವನ್ನಪ್ಪಿದ್ದಾರೆ. ಹೀಗಾಗಿ ಖಾಲಿ ಇದ್ದ ಸ್ಥಾನಕ್ಕೆ ದನಮಿಟ್ಟೇನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಅಂಗನವಾಡಿ ಶಿಕ್ಷಕಿ ಬಿ.ರಾಧಾ ವರ್ಗಾವಣೆಯಾಗಿ ಬಂದಿದ್ದಾರೆ. ಆದರೆ ಈ ಶಿಕ್ಷಕಿ ನಮಗೆ ಬೇಡ, ನಮ್ಮ ಗ್ರಾಮದವರೇ ಶಿಕ್ಷಕಿಯಾಗಿ ಬರಬೇಕು. ಅಲ್ಲಿಯವರೆಗೂ ನಾವು ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ ಎಂದು ಗ್ರಾಮಸ್ಥರು ಹಠ ಹಿಡಿದಿದ್ದಾರೆ.
"ನಾನು ಇಲ್ಲಿಂದ ಹೋಗಲು ಸಿದ್ಧಳಿದ್ದೇನೆ. ಆದರೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ" ಎಂದು ಶಿಕ್ಷಕಿ ಹೇಳುತ್ತಾರೆ. ಈ ವಿಚಾರವಾಗಿ ಶಿಕ್ಷಕಿಗಿಗೂ ಗ್ರಾಮಸ್ಥರಿಗೂ ಜಟಾಪಟಿಯಾಗಿ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಶಿಕ್ಷಕಿ ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.