ಚಿಕ್ಕಬಳ್ಳಾಪುರ: 'ವಿಶ್ವವಿಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ, ಖ್ಯಾತ ರಾಸಾಯನ ವಿಜ್ಞಾನಿ ಸಿ.ಎನ್.ಆರ್.ರಾವ್ ಹೀಗೆ ಎರಡು ಭಾರತ ರತ್ನಗಳನ್ನು ಪಡೆದ ದೇಶದ ಏಕೈಕ ಜಿಲ್ಲೆ ಚಿಕ್ಕಬಳ್ಳಾಪುರ. 'ಚಿಕ್ಕಬಳ್ಳಾಪುರ ಉತ್ಸವ' ಅನ್ನೋದು ಸುಂದರ ಕಾರ್ಯಕ್ರಮವಾಗಿದ್ದು, ನಾನು ಕಣ್ಣು ತುಂಬಿಕೊಡಿದ್ದೇನೆ. ಜಿಲ್ಲೆಯ ದೊಡ್ಡ ಮನಸ್ಸಿನ ಜನತೆ ಉತ್ಸವ ಆಚರಿಸಲು ಉತ್ಸುಕರಾಗಿದ್ದಾರೆ. ಹುರುಪು, ಹುಮ್ಮಸ್ಸು ಇದ್ದಾಗ ಕಾರ್ಯಸಾಧ್ಯವಾಗುತ್ತದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಡಾ.ಕೆ.ಸುಧಾಕರ್ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 'ಚಿಕ್ಕಬಳ್ಳಾಪುರ ಉತ್ಸವ 2023' ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ನಟ ಕಿಚ್ಚ ಸುದೀಪ್ ಅವರು ಕೂಡ ಉದ್ಘಾಟನೆಗೆ ಸಾಥ್ ಕೊಟ್ಟರು. 'ರೇಷ್ಮೆ, ತರಕಾರಿ, ಹೂ ಹಣ್ಣು ಉತ್ಪಾದನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ವಿಶ್ವಕ್ಕೆ ಮಾದರಿಯಾಗಿದೆ. ನಾನು ಕೂಡ ಇಲ್ಲಿನ ಕಾಯಿಪಲ್ಲೆ ಬಳಸುತ್ತೇನೆ' ಎಂದರು. ಇದೇ ವೇಳೆ, ಸರ್ಕಾರದ ವಸ್ತು ಪ್ರದರ್ಶನಗಳು, ಮೇಳಗಳ ಆಶಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹಾಗೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ಸವ ಆಚರಣೆ ಮಾಡುವಂತೆ ತಿಳಿಸಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, 'ಚಿಕ್ಕಬಳ್ಳಾಪುರ ಎಂದರೆ ನೆನಪಿಗೆ ಬರುವುದು ಹಾಲು, ಹಣ್ಣು, ಹೂ ಕೊಡುವ ಜಿಲ್ಲೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುವಂತಾಗಲಿ. ಮಹಿಳೆಯರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ನೆರವು ನೀಡಲಿ. ಸಚಿವ ಕೆ.ಸುಧಾಕರ್ ಅವರು ಈ ಭಾಗದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತಾಗಲಿ' ಎಂದು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜ್ ಮಾತನಾಡಿ, 'ಚಿಕ್ಕಬಳ್ಳಾಪುರ ಜಿಲ್ಲೆಗೆ ಹೊಸದಾಗಿ 'ಫಲಪುಷ್ಪ ಗಿರಿಧಾಮ ನಾಡು' ಎಂದು ಬಸವರಾಜ ಬೊಮ್ಮಾಯಿ ನಾಮಕರಣ ಮಾಡಿದ್ದಾರೆ. ಈ ಜಿಲ್ಲೆ ಹತ್ತಾರು ವರ್ಷಗಳಿಂದ ಬರಗಾಲದ ನಾಡು ಎಂದು ಹೆಸರಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಮಲೆನಾಡು ಆಗಿದೆ. ಕೆರೆ-ಕಟ್ಟೆಗಳು ತುಂಬಿದ್ದು ರೈತರು ಸಂತೋಷದಿಂದ ಇದ್ದಾರೆ. ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಆಗಲಿರುವುದು ಹೆಮ್ಮೆಯ ಸಂಗತಿ. ಸಾದು ಸಂತರು, ವಿಶ್ವ ವಿಖ್ಯಾತ ವಿಜ್ಞಾನಿ, ಹೆಸರಾಂತ ಸಾಹಿತಿಗಳು ಜನಿಸಿದ ನಾಡಾಗಿದೆ. ಇಂತಹ ನಾಡಿನಲ್ಲಿ ಚಿಕ್ಕಬಳ್ಳಾಪುರ ಉತ್ಸವ ಆಚರಣೆ ಮಾಡುತ್ತಿರುವುದು ಸಂತೋಷದ ತಂದಿದೆ' ಎಂದರು.