ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲೊಂದು ನೋವಿನ ಸಂಗತಿ ಹೊರ ಬಂದಿದೆ. ಗೌರಿಬಿದನೂರಿನ ನೂತನ ತಾಲೂಕು ಮಂಚೇನಹಳ್ಳಿ ತಾಲೂಕಿನ ತೊಂಡೆಭಾವಿ ಬಳಿ ರೈಲ್ವೆ ಹಳಿಯ ಮೇಲೆ ಕೆಲ ದಿನಗಳ ಹಿಂದೆ ಮೂರು ದೇಹಗಳ ಪತ್ತೆಯಾಗಿದ್ದವು. ಈ ದೇಹಗಳು ಗುರುತು ಸಿಗದಂತೆ ವಿರೂಪಗೊಂಡಿದ್ದವು. ಈಗ ಈ ಮೂರು ದೇಹಗಳ ಗುರುತು ಪತ್ತೆಯಾಗಿದ್ದು, ಇವರು ಒಂದೇ ಕುಟುಂಬದ ಮೂವರು ಎಂಬುದು ತಿಳಿದು ಬಂದಿದೆ.
ಗೌರಿಬಿದನೂರಿನ ನೂತನ ತಾಲೂಕು ಮಂಚೇನಹಳ್ಳಿ ತಾಲೂಕಿನ ತೊಂಡೆಭಾವಿ ಬಳಿಯ ರೈಲ್ವೆ ಹಳಿಯ ಮೇಲೆ ಸಿಕ್ಕಿದ್ದ ಮೂರು ದೇಹಗಳ ಗುರುತು ಇಂದು ಪತ್ತೆಯಾಗಿದೆ ತೊಂಡೆಭಾವಿ ಗ್ರಾಮದ ನಿವಾಸಿ ಮೈಲಾರಪ್ಪ (50), ಆತನ ಪತ್ನಿ ಪುಷ್ಪಲತಾ (45) ಮತ್ತು ಹಿರಿಯ ಮಗಳು ಮಮತಾ (25) ಮೃತರು ಎಂದು ಗುರುತಿಸಲಾಗಿದೆ. ಕಳೆದ 4 ವರ್ಷಗಳ ಹಿಂದೆ ಮೈಲಾರಪ್ಪ, ಪುಷ್ಪಲತಾ ದಂಪತಿ ಮಗಳು ಮಮತಾಳ ಮದುವೆ ಮಾಡಿದ್ದರು. ಮಮತಾ ಇತ್ತಿಚೇಗೆ ವೈಯಕ್ತಿಕ ಕಾರಣಗಳ ಹಿನ್ನೆಲೆ ಮತ್ತೆ ತವರು ಮನೆಗೆ ವಾಪಸ್ ಆಗಿದ್ದರು. ಇವರ ಮಧ್ಯೆ ಏನಾಯ್ತೋ ಏನೋ ಗೊತ್ತಿಲ್ಲ.. ಕಳೆದ ಮೂರು ದಿನಗಳಿಂದ ಇವರು ನಾಪತ್ತೆಯಾಗಿದ್ದರು.
ಇನ್ನು ಕೊನೆಯ ಮಗಳು ದಾಕ್ಷಾಯಣಿಗೂ ಸಹ ಮದುವೆಯಾಗಿದ್ದು, ಆಕೆ ಸದ್ಯ ಗಂಡನ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ತಮ್ಮತಂದೆ - ತಾಯಿ ಮತ್ತು ಅಕ್ಕಳಿಗೆ ಕರೆ ಮಾಡಿದ ವೇಳೆ ಯಾರು ಕರೆ ಸ್ವೀಕರಿಸಿಲ್ಲ. ಹೀಗಾಗಿ ಗಾಬರಿಗೊಂಡ ದಾಕ್ಷಾಯಣಿ ಮನೆಗೆ ಬಂದು ಪರಿಶೀಲನೆ ನಡೆಸಿದ ವೇಳೆ ತಂದೆ - ತಾಯಿ ಮತ್ತು ಅಕ್ಕ ಕಾಣದ ಸಂಬಂಧ ಆತಂಕಕ್ಕೀಡಾಗಿದ್ದರು. ಈ ಬಗ್ಗೆ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದಾಕ್ಷಾಯಣಿ ದೂರು ನೀಡಲು ತೆರಳಿದ್ದರು. ಈ ವೇಳೆ, ಪೊಲೀಸರು ರೈಲ್ವೇ ಟ್ರಾಕ್ನಲ್ಲಿ ಮೂರು ದೇಹಗಳ ಪತ್ತೆಯಾಗಿವೆ. ನೀವು ನೀಡಿರುವ ವಿವರಗಳು ಮತ್ತು ನಮಗೆ ದೊರೆತ ಮೃತದೇಹಗಳಿಗೆ ಹೊಲಿಕೆಯಾಗುತ್ತಿವೆ. ನೀಮೊಮ್ಮೆ ಮೃತದೇಹಗಳನ್ನು ಪರಿಶೀಲಿಸಿ ಎಂದು ಪೊಲೀಸರು ದಾಕ್ಷಾಯಣಿಗೆ ಸೂಚಿಸಿದ್ದರು.