ಚಿಕ್ಕಬಳ್ಳಾಪುರ: ನಗರದ ಹೊರವಲಯದ ಸೂಲಾಲಪ್ಪ ದಿನ್ನೆಯಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಕಡಲೆಕಾಯಿ ಪರಿಷೆ ನಡೆಸಲಾಯಿತು.
ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಲಾಯಿತು. ಮೈಸೂರು ಮಹಾರಾಜರ ಕಾಲದಿಂದ ಪ್ರತಿ ವರ್ಷ ಸೂಲಾಲಪ್ಪ ದಿನ್ನೆಯಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಜಡಲ ತಿಮ್ಮನಹಳ್ಳಿ ಗ್ರಾಮಸ್ಥರು ಆಂಜನೇಯ ಮೂರ್ತಿಯೊಂದಿಗೆ ತಮ್ಮ ಗ್ರಾಮದಿಂದ ದೀಪಾರತಿ ಮಾಡಿ ಮೆರವಣಿಗೆಯಲ್ಲಿ ದೇವಾಲಯಕ್ಕೆ ಬಂದ ನಂತರ ಆಂಜನೇಯ ಸ್ವಾಮಿ ರಥೋತ್ಸವ ನಡೆಸಿದರು.