ಚಿಕ್ಕಬಳ್ಳಾಪುರ:ಚುನಾವಣೆಗೂ ಮೊದಲೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ನಿರೀಕ್ಷೆ ಮಾಡದ ರೀತಿಯಲ್ಲಿ ಫಲಿತಾಂಶ ಹೊರಬಿದ್ದಿದೆ.
ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಿ ಸೇರಬೇಕಿದ್ದ ಅಧಿಕಾರ ಇದೀಗ ಬಿಜೆಪಿ ಪಾಲಾಗಿದ್ದು, ಈ ಮೂಲಕ ಹೊಸ ನಗರಸಭೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ.
ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಕಾಂಗ್ರೆಸ್ ಪಾಲಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಆಶ್ಚರ್ಯ ರೀತಿಯಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಇದೀಗ ಬಿಜೆಪಿ-ಜೆಡಿಎಸ್ ತೆಕ್ಕೆಗೆ ಸೇರಿಕೊಂಡಿದೆ.
ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಅಧ್ಯಕ್ಷರಾಗಿ ಬಿಜೆಪಿ ಆನಂದ ರೆಡ್ಡಿ ,ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ವೀಣಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಆನಂದ ರೆಡ್ಡಿ 22 ಮತ ಪಡೆದುಕೊಂಡು ಅಧಿಕಾರದ ಗದ್ದುಗೆ ಹಿಡಿದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಬಿಕಾ ಕೇವಲ 9 ಮತ ಪಡೆದುಕೊಂಡು ಸೋಲು ಅನುಭವಿಸಿದ್ದಾರೆ.
ಒಟ್ಟು 31 ಸದಸ್ಯ ಸ್ಥಾನಗಳಿರುವ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ 16, ಬಿಜೆಪಿ 9, ಜೆಡಿಎಸ್ 2 , ಪಕ್ಷೇತರ 4 ಸ್ಥಾನ ಪಡೆದುಕೊಂಡಿತ್ತು.ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಿ ಅಧಿಕಾರ ಗದ್ದುಗೆ ಸಿಗುವ ಲೆಕ್ಕಾಚಾರವಿತ್ತು. ಆದರೆ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವರ ಡಾ ಕೆ ಸುಧಾಕರ್ ಕಾರ್ಯತಂತ್ರಕ್ಕೆ ಬಿಜೆಪಿ ಪಕ್ಷ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವಂತಾಗಿದೆ.
ಚುನಾವಣೆಯ ನಂತರ ಮಾತಾನಾಡಿದ ಸಚಿವ ಸುಧಾಕರ್, ಯಾವುದೇ ಪಕ್ಷಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ನೋಡಲಾಗುವುದು. ಚಿಕ್ಕಬಳ್ಳಾಪುರ ನಗರವನ್ನು ಸುಂದರ,ಸುರಕ್ಷಿತ, ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.