ಚಿಕ್ಕಬಳ್ಳಾಪುರ:ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಪ್ರೇಮಿಗಳು ಪ್ರೀತಿಸಿ ಮದುವೆಯಾಗಿದ್ದು, ತಮಗೆ ತಮ್ಮ ಪೋಷಕರಿಂದ ಜೀವ ಭಯವಿದೆ, ಹಾಗಾಗಿ ರಕ್ಷಣೆ ನೀಡಿ ದಾಂಪತ್ಯ ಜೀವನ ನಡೆಸಲು ಅವಕಾಶ ಮಾಡಿಕೊಡುವಂತೆ ಪೊಲೀಸರ ಮೊರೆ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಭಾನುಶ್ರೀ ಮತ್ತು ಮಧುಸೂಧನ್ ಮದುವೆಯಾದ ಜೋಡಿಯಾಗಿದ್ದು ತಮ್ಮ ಪೋಷಕರಿಂದ ತಮಗೆ ಜೀವ ಭಯವಿದೆ ಎಂದು ಯುವತಿಯು ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾನುಶ್ರೀ ಮೂಲತಃ ಗುಡಿಬಂಡೆ ತಾಲೂಕಿನ ಜಂಬಿಗೆಮರದಹಳ್ಳಿ ನಿವಾಸಿ. ಮಧುಸೂಧನ್ ಅದೇ ತಾಲೂಕಿನ ಕಾಮಶೆಟ್ಟಿಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ''ತಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಈ ವಿಚಾರ ಇಬ್ಬರ ಮನೆಯಲ್ಲಿಯೂ ಗೊತ್ತಿತ್ತು. ಆದರೆ, ಹುಡುಗ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ನಮ್ಮ ಪೋಷಕರ ಕಡೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲ. ಹೀಗಾಗಿ ಬೇರೆ ಮದುವೆ ಮಾಡಲು ಪ್ರಯತ್ನ ನಡೆಸಿದ್ದರು.
ಇದರಿಂದ ಪೋಷಕರಿಗೆ ಹೇಳದೇ ಕೇಳದೆ ಹುಡುಗನೊಂದಿಗೆ ಆಗಸ್ಟ್ 3 ರಂದು ದೇವಾಲಯದಲ್ಲಿ ಮದುವೆಯಾಗಿದ್ದೇವೆ. ಬೇರೆ ಸಮುದಾಯದ ಹುಡುಗನನ್ನು ಮದುವೆಯಾದ್ದು ನಿನ್ನನ್ನು ಎಳೆದುಕೊಂಡು ಬೇರೆ ಮದುವೆ ಮಾಡಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ. ನಮ್ಮ ತಂದೆ - ತಾಯಿಂದ ಜೀವ ಭಯವಿದೆ. ಹಾಗಾಗಿ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಕಾನೂನಿನಂತೆ ಅವಕಾಶ ಮಾಡಿಕೊಡಿ'' ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೂ ಮೊದಲು ಯುವತಿಯ ಪೋಷಕರು ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ : ಪ್ರೀತಿಸಿ ದೂರಾಗಲು ಯತ್ನಿಸಿದ ಯುವಕನೊಂದಿಗೆ ಮದುವೆಯಾದ ಯುವತಿ