ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ರೈತನ ಕೈ ಹಿಡಿದ ದ್ರಾಕ್ಷಿ ಬೆಳೆ - ಉತ್ತಮ ಬೆಲೆಯಿಂದ ರೈತನ ಮೊಗದಲ್ಲಿ ಮಂದಹಾಸ

ಎರಡು ವರ್ಷಗಳಿಂದ ನಷ್ಟ ಅನುಭವಿಸಿದ್ದ ರೈತರು ಇದೀಗ ಬೆಲೆ ಏರಿಕೆಯಿಂದ ಫುಲ್​ ಖುಷ್​ ಆಗಿದ್ದಾರೆ.

chikkaballapur-grapes-price-hike-farmers-happy
ರೈತನ ಕೈ ಹಿಡಿದ ದ್ರಾಕ್ಷಿ ಬೆಳೆ- ಬೆಲೆ ಏರಿಕೆಯಿಂದ ರೈತನ ಮೊಗದಲ್ಲಿ ಮಂದಹಾಸ

By

Published : Jun 1, 2023, 5:13 PM IST

ರೈತನ ಕೈ ಹಿಡಿದ ದ್ರಾಕ್ಷಿ ಬೆಳೆ- ಬೆಲೆ ಏರಿಕೆಯಿಂದ ರೈತನ ಮೊಗದಲ್ಲಿ ಮಂದಹಾಸ

ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ಜಿಲ್ಲೆ ಬರದ ನಾಡಾದ್ರೂ ಇಲ್ಲಿನ ರೈತರು ವಿನೂತನ ತಂತ್ರಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ಬಳಸಿಕೊಂಡು, ತರೇಹವಾರಿ ಹಣ್ಣು, ತರಕಾರಿ ಹೂ ಬೆಳೆಯುವುದರಲ್ಲಿ ದೇಶದಲ್ಲೇ ಹೆಸರುವಾಸಿಯಾಗಿದ್ದಾರೆ. ಇನ್ನು ದ್ರಾಕ್ಷಿ ಬೆಳೆದು ದೇಶ ವಿದೇಶಕ್ಕೆ ರಪ್ತು ಮಾಡುವುದರಲ್ಲಿ ಚಿಕ್ಕಬಳ್ಳಾಪುರ ರೈತರದ್ದು ಎತ್ತಿದ ಕೈ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ರೈತರು ಬರೋಬ್ಬರಿ ಎರಡು ಸಾವಿರದ ಐನೂರು ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ.

ಆದರೆ, ಕಳೆದೊಂದು ವರ್ಷದಿಂದ ಬೆಳೆದ ದ್ರಾಕ್ಷಿಗೆ ಮಾರುಕಟ್ಟೆಗಳಲ್ಲಿ ಸೂಕ್ತ ಬೆಲೆ ಸಿಗದೇ ಕೈಗೆಟಕುವಷ್ಟರಲ್ಲಿ ತೃಪ್ತಿ ಪಡುತ್ತಿದ್ದರು. ಆದರೆ, ಕೆಲವು ದಿನಗಳಿಂದ ಏಕಾಏಕಿ ಬೆಲೆ ಏರಿಕೆ ಕಂಡಿದ್ದು, ರೆಡ್ ಗ್ಲೋಬ್ 80 ರಿಂದ 120 ರೂ., ದಿಲ್ ಕುಶ್​ 20 ರಿಂದ 60 ರೂ., ಶರತ್ 60 ರಿಂದ 100 ರೂ. ಆಗಿದೆ ಎಂದು ದ್ರಾಕ್ಷಿ ವರ್ತಕ ಎಂ. ಎಫ್. ಸಿ. ನಾರಾಯಣಸ್ವಾಮಿ ಮಾಹಿತಿ ನೀಡಿದರು. ಕಳೆದ ಎರಡು ವರ್ಷಗಳಿಂದ ಉತ್ತಮ ಬೆಲೆ ಇಲ್ಲದೇ ನಷ್ಟ ಅನುಭವಿಸುತ್ತಿದ್ದ ರೈತರಿಗೆ, ಈ ಬಾರಿ ಉತ್ತಮ ಬೆಲೆ ಸಿಕ್ಕಿದ್ದು ಸಾಕಷ್ಟು ಸಂತಸ ತಂದಿದೆ.

ಇನ್ನು ರೆಡ್ ಗ್ಲೋಬ್ ದ್ರಾಕ್ಷಿ 100 ರೂಪಾಯಿ ಆದರೆ, ದಿಲ್ ಕುಶ್​ 60 ರೂ. ಆಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡ ಮರಳಿ ಗ್ರಾಮದ ಯುವ ರೈತ ಶರತ್ ಕುಮಾರ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ತಾನು ಒಂದು ಎಕರೆ ಪ್ರದೇಶದಲ್ಲಿ ದಿಲ್ ಕುಶ್ ದ್ರಾಕ್ಷಿ ಬೆಳೆದಿದ್ದು, ಒಂದು ಎಕರೆಗೆ ಬರೋಬ್ಬರಿ ಸರಿ ಸುಮಾರು 30 ಟನ್ ದ್ರಾಕ್ಷಿ ಆಗೋ ನಿರೀಕ್ಷೆಯಿದೆ.

ಈಗಾಗಲೇ ಮುಕ್ಕಾಲು ಭಾಗ ತೋಟವನ್ನು ವರ್ತಕರು ಕಟಾವು ಮಾಡುತ್ತಿದ್ದು ಕೆ.ಜಿ ಗೆ 60 ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದೇವೆ ಎಂದು ಹೇಳಿದ್ದಾರೆ. ಯುವ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಒಟ್ಟಾರೆ ಪದೇ ಪದೆ ಬೆಲೆ ಕುಸಿತದಿಂದ ದ್ರಾಕ್ಷಿಯಲ್ಲಿ ಹುಳಿ ಕಾಣುತ್ತಿದ್ದ ರೈತರಿಗೆ, ಈ ಬಾರಿ ದ್ರಾಕ್ಷಿ ಫಸಲು ರೈತರಿಗೆ ಸಿಹಿ ಉಣಿಸಿದೆ. ಬಂಪರ್ ಬೆಲೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಇನ್ನೊಂದೆಡೆ ಬೆಳಗಾವಿಯ ಅಥಣಿ ತಾಲೂಕಿನ ತೇಲಸಂಗ್​ ಗ್ರಾಮದ ಇಂಗಳಗಿ ತೋಟದ ವಸತಿ ಪ್ರದೇಶಕ್ಕೆ ರಸ್ತೆ ಸಂಪರ್ಕ ಇಲ್ಲದೆ ಇಲ್ಲಿನ ತೋಟಗಳಲ್ಲಿ ರೈತರು ಬೆಳೆದ ದ್ರಾಕ್ಷಿ ತೋಟದಲ್ಲೇ ಉಳಿಯುವಂತಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಎರಡು ಎಕರೆ ತೋಟದಲ್ಲಿ ಬೆಳೆದ ದ್ರಾಕ್ಷಿ ಬೆಳೆ ಕೊಯ್ದು ಮಾರುಕಟ್ಟೆಗೆ ಸಾಗಿಸಲು ದಾರಿ ಇಲ್ಲದೆ, ತೋಟದಲ್ಲೇ, ಗಿಡಗಳಲ್ಲೇ ಕೊಳೆಯುತ್ತಿದೆ. ಈಗಾಗಲೇ ಹಲವು ಬೆಳೆಗಳನ್ನು ಬೆಳೆದಿರುವ ರೈತರು ಸ್ಥಳಕ್ಕೆ ವಾಹನ ಬಾರದೇ ಇರುವುದರಿಂದ ಬೆಳೆ ರಾಶಿ ಮಾಡದೆ ಹಾಗೆಯೇ ಬಿಟ್ಟಿದ್ದೇವೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದರು.

ಇದನ್ನೂ ಓದಿ:ವಿಜಯಪುರ: ಜಿಲ್ಲೆಯಲ್ಲಿ ಆಲಿಕಲ್ಲು ಮಳೆ, ಧರೆಗುರುಳಿದ ದ್ರಾಕ್ಷಿ ಬೆಳೆ

ABOUT THE AUTHOR

...view details