ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಕೇಂದ್ರ ಸರ್ಕಾರವೇ 'ಬರಪೀಡಿತ' ಎಂದು ಗುರುತಿಸಿದೆ. ಬರ ವೀಕ್ಷಣೆಗೆಂದು ಎಲ್ಲಾ ಪಕ್ಷದ ರಾಜಕಾರಣಿಗಳು ನಾಮಕಾವಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಇವತ್ತು ಸ್ವತ: ಜಿಲ್ಲಾಧಿಕಾರಿಯೇ ಜನರ ನೆರವಿಗೆ ಧಾವಿಸಿ ಅಹವಾಲು ಆಲಿಸಿದರು.
ಜೀವಜಲವಿಲ್ಲದೆ ಮತದಾನವನ್ನೇ ಬಹಿಷ್ಕರಿಸಿದ ಗ್ರಾಮಗಳನ್ನು ಓಲೈಕೆ ಮಾಡಿದ ಜಿಲ್ಲಾಧಿಕಾರಿಗಳು, ಇಂದು ಜಿಲ್ಲೆಯ ಹಲವು ಗ್ರಾಮ ಹಾಗೂ ನಗರಗಳಿಗೆ ಭೇಟಿ ಕೊಟ್ಟರು. ಚಿಂತಾಮಣಿ ನಗರ ಭಾಗದಲ್ಲಿ ನೀರಿನ ಸಮಸ್ಯೆ ಸೇರಿದಂತೆ, ಚರಂಡಿಗಳ ಸ್ವಚ್ಛತೆ, ಕಸದ ರಾಶಿ ಕುರಿತು ಈಗಾಗಲೇ ಹಲವು ದೂರುಗಳು ನಗರಸಭೆ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದ್ದವು. ಈ ವೇಳೆ ಡಿಸಿ ಅನಿರುದ್ಧ್ ಶ್ರಾವಣ್ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಿಂತಾಮಣಿ ನಗರಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಡಿಸಿ ಅನಿರುದ್ಧ್ ಶ್ರಾವಣ್ ನಗರದ ಆಶ್ರಯ ಬಡಾವಣೆ ಹಾಗೂ ವೆಂಕಟಗಿರಿ ಕೋಟೆಯ ನಿವಾಸಿಗಳು ವಾರ್ಡ್ಗಳಲ್ಲಿನ ತೊಂದರೆಗಳ ಬಗ್ಗೆ ವಿವರಿಸುತ್ತಾ ಅಧಿಕಾರಿಗಳ ಅಸಮಾಧಾನ ಪ್ರದರ್ಶಿಸಿದರು. ವಾರ್ಡ್ಗಳಲ್ಲಿ ನಗರಸಭೆ ಅಧಿಕಾರಿಗಳು ಸ್ವಚ್ಛತೆ ಮಾಡುವುದರಲ್ಲಿ ವಿಫಲರಾಗಿದ್ದು, ಸೂಕ್ತ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ದೂರಿದರು.
ಅಧಿಕಾರಿಗಳಿಗೆ ಈಗಾಗಲೇ ಸಾಕಷ್ಟು ಬಾರಿ ತಾಕೀತು ಕೊಟ್ಟರೂ ಉಪಯೋಗವಾಗದ ಕಾರಣ, ನಗರಸಭೆ ಅಧಿಕಾರಿಗಳಾದ ಚಕ್ರಪಾಣಿ ಹಾಗೂ ಉಮಾಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಸಮಯಕ್ಕೆ ಸರಿಯಾಗಿ ವಾರ್ಡುಗಳಿಗೆ ನೀರು ಸರಬರಾಜು ಮಾಡಬೇಕು ಹಾಗೂ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ನಗರ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇಲ್ಲಿ ಟ್ಯಾಂಕರ್ಗಳ ಮೂಲಕ ನೀರು ಸಾಗಾಣಿಕೆ ಮಾಡಲಾಗುತ್ತಿದೆ. ಸದ್ಯ ನಗರದ ಸುತ್ತಲಿನ ಕೆರೆಗಳಲ್ಲಿ ತ್ಯಾಜ್ಯಗಳನ್ನು ಸುರಿದ್ದಿದ್ದು ತೊಂದರೆ ಉಂಟಾಗುತ್ತಿದೆ. ಹೂಳೆತ್ತುವ ಕಾರ್ಯವನ್ನು ನಡೆಸಬೇಕಾಗಿದೆ. ಸದ್ಯ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ಕೊಟ್ಟರು.