ಚಿಕ್ಕಬಳ್ಳಾಪುರ:ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದ ಚಾಲಕ ಆಟೋ ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 9 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ. ಹಿಂದೂಪುರದಿಂದ ಗೌರಿಬಿದನೂರಿನ ಕಡೆ ಬರುತ್ತಿದ್ದಾಗ ಹಳೆಯ ಆರ್‌ಟಿಒ ಕಚೇರಿ ಬಳಿಯಿದ್ದ ಹಂಪ್ಸ್ ಬಳಿ ವೇಗವಾಗಿ ಬರುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಆಟೋ ರಿಕ್ಷಾ ಹಿಂಬದಿಯಲ್ಲಿ ಕೂತಿದ್ದ ನಾಲ್ವರು ಸೇರಿದಂತೆ 9 ಮಂದಿಗೆ ಗಾಯಗಳಾಗಿವೆ. ಆಟೋದಲ್ಲಿ ಇದ್ದ ಗಾಯಾಳುಗಳು ದೊಡ್ಡಬಳ್ಳಾಪುರದವರಾಗಿದ್ದು, ಗೌರಿಬಿದನೂರು ತಾಲೂಕಿನ ಬೈಚಾಪುರ ಗ್ರಾಮದ ಸಂಬಂಧಿಕರ ಮನೆಯ ಶುಭ ಕಾರ್ಯಕ್ಕೆ ಹೋಗಿ ವಾಪಸ್ಸಾಗುತ್ತಿದ್ದರು. ಘಟನೆಯಿಂದ ಆಕ್ರೋಶಗೊಂಡ ಗಾಯಾಳುಗಳ ಸಂಬಂಧಿಕರು ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಗಾಜನ್ನು ಪುಡಿ ಮಾಡಿದ್ದಾರೆ.