ಚಿಕ್ಕಬಳ್ಳಾಪುರ:ರಸ್ತೆ ಬದಿಯಲ್ಲಿದ್ದ ದುಗ್ಗಲಮ್ಮ ದೇಗುಲಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿ, ಚಾಲಕ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಸಮೀಪ ನಡೆದಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಅನೀಲ್ ಕುಮಾರ್ ಮೃತ ವ್ಯಕ್ತಿ. ಕ್ಯಾಂಟರ್ ಚಾಲಕ ಯಲ್ಲಪ್ಪ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊ ಲೋಡ್ ಇಳಿಸಿ ವಾಪಸ್ ಆಗುತ್ತಿದ್ದ ವೇಳೆ ಅತೀ ವೇಗದಿಂದ ಬಂದ ಕ್ಯಾಂಟರ್ ರಸ್ತೆ ಬದಿಯಲ್ಲಿರುವ ದುಗ್ಗಲಮ್ಮ ದೇವಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ ಎನ್ನಲಾಗ್ತಿದೆ. ಡಿಕ್ಕಿ ರಭಸಕ್ಕೆ ದೇಗುಲ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದು ಬಂದಿದೆ.