ಕರ್ನಾಟಕ

karnataka

ETV Bharat / state

ಜಿಲ್ಲಾಧಿಕಾರಿ ಆಡಳಿತ ವೈಖರಿ ಪರಿವೀಕ್ಷಿಸಿದ ವಿದ್ಯಾರ್ಥಿನಿ ಬಿ ಎಮ್ ಪಲ್ಲವಿ ತೀರ್ಥ - DC work activity

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ “ಕೌಶಲ್ಯಸ್ಫೂರ್ತಿ” ಶೀರ್ಷಿಕೆಯಡಿ “ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ” ಕಾರ್ಯಕ್ರಮದಡಿ ಭಾಗವಹಿಸಲು ಅವಕಾಶವಿರುವ ಹಿನ್ನೆಲೆ ವಿದ್ಯಾರ್ಥಿನಿ ಬಿ ಎಮ್ ಪಲ್ಲವಿ ತೀರ್ಥ ಶುಕ್ರವಾರ ಜಿಲ್ಲಾಧಿಕಾರಿ ಕಾರ್ಯ ಚಟುವಟಿಕೆಗಳಲ್ಲಿ ಜೊತೆಯಲ್ಲಿದ್ದರು.

The District Collector presented the award letter to the student BM Pallavi.
ವಿದ್ಯಾರ್ಥಿನಿ ಬಿ ಎಮ್ ಪಲ್ಲವಿಗೆ ಜಿಲ್ಲಾಧಿಕಾರಿ ಪ್ರಶಸ್ತಿ ಪತ್ರ ನೀಡಿದರು.

By

Published : Aug 27, 2022, 8:12 PM IST

ಚಿಕ್ಕಬಳ್ಳಾಪುರ:ಜಿಲ್ಲಾಧಿಕಾರಿಗಳ ದಿನಚರಿ ಹೇಗಿರುತ್ತದೆ? ನಿತ್ಯ ಏನೆಲ್ಲ ಕೆಲಸ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿರುತ್ತಾರೆ ಎಂಬ ಕೌತುಕ ಬಹುತೇಕರಲ್ಲಿ ಸರ್ವೆಸಾಮಾನ್ಯವಾಗಿರುತ್ತದೆ. ಆದರೆ ಅದನ್ನು ನೋಡಲು ಅವಕಾಶ ಸಿಗುವುದಿಲ್ಲಾ, ಬೆಳಗ್ಗಿನಿಂದ ಸಂಜೆ ತನಕ ಅಧಿಕಾರಿಗಳ ಕಾರಿನಲ್ಲಿ ಓಡಾಡಿ, ವಿವಿಧ ಸಭೆ- ಸಮಾರಂಭಗಳಲ್ಲಿ ಪಾಲ್ಗೊಂಡು ಎಲ್ಲವನ್ನೂ ಆಲಿಸಿ, ನೋಟ್ಸ್ ಮಾಡಿಕೊಳ್ಳುವ ಮೂಲಕ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದ ಬಿ ಎಮ್ ಪಲ್ಲವಿ ತೀರ್ಥ ಅವರು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಜೊತೆಯಲ್ಲಿದ್ದು ಅವರ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಜಿಲ್ಲಾಧಿಕಾರಿಯೊಂದಿಗೆ ಆಡಳಿತವನ್ನು ಹತ್ತಿರದಿಂದ ಕಂಡಿದ್ದಾಳೆ.

ಜಿಲ್ಲಾ ಕೌಶಲ್ಯ ದಿನಾಚರಣೆಯ ಅಂಗವಾಗಿ ಯುವ ಜನತೆಯಲ್ಲಿ ಕೌಶಲ್ಯಾಭಿವೃದ್ಧಿ ಮಹತ್ವದ ಕುರಿತು ಜಾಗೃತಿ ಮೂಡಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು 8 ರಿಂದ 12 ನೇ ತರಗತಿ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದ “ಕೌಶಲ್ಯ ಮತ್ತು ಸಾಮರ್ಥ್ಯಗಳ ಮೇಲೆ ಕೇಂದ್ರೀಕೃತವಾದ ಉನ್ನತ ಶಿಕ್ಷಣ ಬಗ್ಗೆ ಮರುಚಿಂತನೆ” ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ (ವಿಜ್ಞಾನ ವಿಭಾಗ) ವಿದ್ಯಾರ್ಥಿನಿ ಬಿ ಎಮ್ ಪಲ್ಲವಿ ತೀರ್ಥ ಅವರು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ವಿಜೇತರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಒಟ್ಟಾರೆ 21 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜೇತರಾದ ವಿದ್ಯಾರ್ಥಿಗಳಿಗೆ “ಕೌಶಲ್ಯಸ್ಫೂರ್ತಿ” ಶೀರ್ಷಿಕೆಯಡಿ “ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ” ಕಾರ್ಯಕ್ರಮದಡಿ ಭಾಗವಹಿಸಲು ಅವಕಾಶವಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಬಿ ಎಮ್ ಪಲ್ಲವಿ ತೀರ್ಥ ಅವರು ಶುಕ್ರವಾರ ಜಿಲ್ಲಾಧಿಕಾರಿ ಕಾರ್ಯ ಚಟುವಟಿಕೆಗಳಲ್ಲಿ ಜೊತೆಯಲ್ಲಿದ್ದರು. ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಪಲ್ಲವಿಯನ್ನು ಜಿಲ್ಲಾಧಿಕಾರಿ ವಿದ್ಯಾರ್ಥಿನಿ ಬರೆದ ಪ್ರಬಂಧವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿ ಪತ್ರ ಹಾಗೂ ಕೌಶಲ್ಯ ಕೈಪಿಡಿ ಪುಸ್ತಕವನ್ನು ನೀಡಿ ಅಭಿನಂದಿಸಿದರು.

ಯುವಜನರಲ್ಲಿ ಕೌಶಲ್ಯ ಹೆಚ್ಚಿಸುವುದು ಮುಖ್ಯ: ಜಿಲ್ಲಾಧಿಕಾರಿ ಎನ್ ಎಮ್ ನಾಗರಾಜ್:ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಗೆ ಜಿಲ್ಲೆಯಲ್ಲಿ ಮೊದಲ ಸ್ಥಾನಗಳಿಸಿದ ವಿದ್ಯಾರ್ಥಿನಿ ಬಿ.ಎಮ್.ಪಲ್ಲವಿ ತೀರ್ಥ ಅವರು ಜಿಲ್ಲೆಗೆ ಉತ್ತಮ ಹೆಸರು ತಂದಿರುವುದು ಸಂತೋಷವಾಗಿದೆ. ಸರ್ಕಾರದ ನಿರ್ದೇಶನದಂತೆ ಮಾರ್ಗದರ್ಶನ ನೀಡಿದ್ದೇವೆ. ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಕಲ್ಪಿಸಿಕೊಡುವುದು ಕೂಡ ಉತ್ತಮ ಕಾರ್ಯವಾಗಿದೆ ಎಂದು ಅಭಿನಂದಿಸಿದರು.

ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಕೌಶಲ್ಯವನ್ನು ಹೆಚ್ಚಿಸಬೇಕು. ವಿದ್ಯಾರ್ಥಿಗಳು ಪುಸ್ತಕಕ್ಕೆ ಸೀಮಿತವಾಗದೇ ಕ್ಷೇತ್ರ ಭೇಟಿ ಮಾಡಿ ಸರ್ಕಾರಿ ಆಡಳಿತದ ಕಾರ್ಯ ಚಟುವಟಿಕೆಗಳನ್ನು ಹಾಗೂ ಸಮಾಜದ ಹಾಗು-ಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಐಎಎಸ್ ಅಧಿಕಾರಿಯಾಗುವ ಗುರಿ :ಇಂದು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಅವರ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತಮ ಅಧಿಕಾರಿಯಾಗಿ ಸಮಾಜಸೇವೆ ಮಾಡುವ ಗುರಿ ಹೊಂದಿದ್ದೇನೆ ಎಂದು ಬಿ ಎಮ್ ಪಲ್ಲವಿ ತೀರ್ಥ ತಮ್ಮ ಅನುಭವವನ್ನು ಹಂಚಿಕೊಂಡರು.

ಬಿ ಎಮ್ ಪಲ್ಲವಿ ತೀರ್ಥ ಭಾಗಿಯಾದ ಇಂದಿನ ಸರ್ಕಾರಿ ಕಾರ್ಯಕ್ರಮಗಳು :ಮೊದಲಿಗೆ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ “ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿ, ಸರ್ಕಾರಿ ಯೋಜನೆಗಳು ಹಾಗೂ ಸವಲತ್ತುಗಳ ಕುರಿತು ಮಾಹಿತಿ ಪಡೆದುಕೊಂಡರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಬೀಡಗಾನಹಳ್ಳಿ, ದೇವಿಶೆಟ್ಟಿಹಳ್ಳಿ, ಯಲುವಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಿವಿಧ ಕಾಮಗಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಶಂಕುಸ್ಥಾಪನೆ ಮಾಡಿದರು. ಈ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿ ಹಾಗೂ ವಿದ್ಯಾರ್ಥಿನಿ ಪಲ್ಲವಿ ಭಾಗಿಯಾಗಿ ಸರ್ಕಾರಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಿಳಿದುಕೊಂಡರು. ನಂತರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಪಡಿಸುವ ವೇಳೆಯಲ್ಲಿ ಭಾಗಯಾಗಿದ್ದರು.

ಬಿ ಎಮ್ ಪಲ್ಲವಿ ತೀರ್ಥ ಪರಿಚಯ:ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದ ನಿವಾಸಿಗಳಾದ ಮಂಜುನಾಥ್ ಹಾಗೂ ನಾರಾಯಣಮ್ಮ ಅವರ ಪುತ್ರಿ ಬಿ ಎಮ್ ಪಲ್ಲವಿ ತೀರ್ಥ. ಇವರು ಪ್ರಸ್ತುತ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ (ವಿಜ್ಞಾನ ವಿಭಾಗದಲ್ಲಿ) ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಸಾದ್ ಎಮ್, ಜಿಲ್ಲಾ ಸಂಕಲ್ಪ್ ಯೋಜನೆಯ ಸಮಾಲೋಚಕ ರಾಜಣ್ಣ, ಎಮ್.ಜಿ.ಎನ್.ಎಫ್ ತರಬೇತುದಾರ ಅಶಿಶ್ ಶೆಟ್ಟಿ ಹಾಗೂ ಉದ್ಯೋಗಕೋಶದ ನೋಡಲ್ ಅಧಿಕಾರಿ ಶಿವಾನಂದ್ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ :ಕಲಬುರಗಿ ಡಿಸಿ ಕಾರ್ಯವೈಖರಿ ವೀಕ್ಷಣೆಗೆ ವಿದ್ಯಾರ್ಥಿನಿಗೆ ಸಿಕ್ತು ಅಪೂರ್ವ ಅವಕಾಶ

ABOUT THE AUTHOR

...view details