ಚಿಕ್ಕಬಳ್ಳಾಪುರ: ಉಸಿರಾಟದ ಸಮಸ್ಯೆಯಿಂದ ರಸ್ತೆ ಬದಿಯಲ್ಲಿ ಬಿದ್ದಿದ್ದ ಭಿಕ್ಷುಕನನ್ನು ತಳ್ಳುವ ಗಾಡಿಯಲ್ಲಿ ನಗರಸಭೆಯ ಮುಂಭಾಗದಲ್ಲಿ ಮಲಗಿಸಲು ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದ ಭಿಕ್ಷುಕ: ತಳ್ಳುವ ಗಾಡಿಯಲ್ಲಿ ಸಾಗಿಸಲು ಯತ್ನ!
ಉಸಿರಾಟದ ಸಮಸ್ಯೆಯಿಂದ ರಸ್ತೆ ಬದಿಯಲ್ಲಿ ಬಿದ್ದಿದ್ದ ಭಿಕ್ಷುಕನನ್ನು ತಳ್ಳುವ ಗಾಡಿಯಲ್ಲಿ ಸ್ಥಳಾಂತರಿಸಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ನಗರದ ಎಂಜಿ ವೃತ್ತದ ಮರವೊಂದರ ಕೆಳಗೆ ಸುಮಾರು 70 ವರ್ಷ ಅಪರಿಚಿತ ಭಿಕ್ಷುಕ ಉಸಿರಾಟ ತೊಂದರೆಯಿಂದ ನರಳುತ್ತಿದ್ದ. ಇದನ್ನು ಕಂಡು ಅಲ್ಲಿಯೇ ಇದ್ದ ಅಂಗಡಿ ಮಾಲೀಕರು ಬೇರೆ ಕಡೆ ಮಲಗಿಸಲು ಕೆಲಸ ಮಾಡುವ ಸಿಬ್ಬಂದಿಗೆ ತಿಳಿಸಿದ್ದಾರೆ. ಸಿಬ್ಬಂದಿ ಆ ಭಿಕ್ಷುಕನನ್ನು ತಳ್ಳುವ ಗಾಡಿಯಲ್ಲಿ ನಗರಸಭೆ ಮುಂಭಾಗದಲ್ಲಿ ಮಲಗಿಸಲು ಪ್ರಯತ್ನಿಸುತ್ತಿದ್ದರು.
ಈ ವೇಳೆ ಈಟಿವಿ ಭಾರತ ವರದಿಗಾರ ಹಾಗೂ ನಗರ ಠಾಣೆ ಪಿಎಸ್ಐ ಪ್ರಸನ್ನ ಕುಮಾರ್ ಆ್ಯಂಬುಲೆನ್ಸ್ಗೆ ಕರೆ ಮಾಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುಡ್ಡಿರುವವರು ಆಸ್ಪತ್ರೆ ಸೇರುತ್ತಾರೆ, ಭಿಕ್ಷುಕನ ಪಾಡು ಯಾರಿಗೂ ಬೇಡ ಎಂಬತಾಗಿದೆ. ಇನ್ನು ಜೀವಂತ ವ್ಯಕ್ತಿಯನ್ನು ತಳ್ಳುವ ಗಾಡಿಯಲ್ಲಿ ಹಾಕಿಕೊಂಡು ಹೋಗಿದ್ದು ಅಮಾನವೀಯ ಎಂದು ಸಾರ್ವಜನಿಕರು ಮಮ್ಮುಲ ಮರುಗಿದ್ದಾರೆ.