ಚಿಕ್ಕಬಳ್ಳಾಪುರ: ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದು ರಾತ್ರಿಯಿಡೀ ಜನರ ನಿದ್ದೆ ಕೆಡಿಸಿದ್ದ ಕರಡಿಯೊಂದನ್ನು ಗ್ರಾಮಸ್ಥರೇ ಗ್ರಾಮದಿಂದ ಕಾಡಿಗೆ ಓಡಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುತ್ತಲು ಕಾಡು ಪ್ರದೇಶವಿದ್ದು, ಆಹಾರ ಹುಡುಕಿಕೊಂಡು ಕರಡಿಯೊಂದು ಕಳೆದ ರಾತ್ರಿಯೇ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ರಾತ್ರಿಯಿಡೀ ಕರಡಿ ಗ್ರಾಮವೆಲ್ಲಾ ಸುತ್ತಾಡುತ್ತಿದ್ದ ಕಾರಣ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಗೊಂಡಿದ್ದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅಧಿಕಾರಿಗಳು ಬರುವ ಮೊದಲೇ ಮುಂಜಾನೆ ಗ್ರಾಮಸ್ಥರೆಲ್ಲಾ ಸೇರಿ ಕರಡಿಯನ್ನು ಗ್ರಾಮದಿಂದ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.