ಚಿಕ್ಕಬಳ್ಳಾಪುರ :ಬ್ಯಾಂಕ್ ಆಫ್ ಬರೋಡಾ ದಿಬ್ಬೂರು ಶಾಖೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರು ಗ್ರಾಮದ ಸುತ್ತಮುತ್ತಲಿನ ರೈತರು ಕೃಷಿ ಸಾಲ ಮಾಡಿದ್ದು, ಕಳೆದ ಮೂರು ವರ್ಷದಿಂದ ಕೊರೋನಾ ಕಾರಣದಿಂದ ಸಾಲ ಮರುಪಾವತಿಯಾಗದ ಹಿನ್ನೆಲೆ ರೈತರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಬ್ಯಾಂಕ್ ಮ್ಯಾನೇಜರ್ ಬಿ.ಎಸ್. ಶರವಣನ್ ಯುಶು ಸಾಲ ಮರುಪಾವತಿಸುವಂತೆ ನೋಟಿಸ್ ನೀಡಿದ್ದಾರೆ. ಆಕ್ರೋಶಗೊಂಡ ರೈತರು ಬ್ಯಾಂಕ್ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ.
ಕೊರೋನಾದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈಗ ಅದೆಲ್ಲದರಿಂದ ಹೊರಬರುತ್ತಿದ್ದೇವೆ. ಅದಲ್ಲದೇ ಈ ಬಾರಿ ಸ್ವಲ್ಪ ಚೆನ್ನಾಗಿ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದೇವಷ್ಟೆ. ಜೀವನ ಸುಧಾರಿಸುತ್ತಿರುವಾಗಲೇ ಬ್ಯಾಂಕ್ ಸಿಬ್ಬಂದಿ ರೈತರ ಮನೆಗಳಿಗೆ ಹೋಗಿ ನೋಟಿಸ್ ಕೊಟ್ಟು ನಾಲ್ಕು ದಿನಗಳಲ್ಲಿ ಹಣ ಪಾವತಿಸಲು ಆರ್ಡರ್ ಮಾಡಿದ್ದಾರೆ. ಇನ್ನೂ ಸಣ್ಣಪುಟ್ಟ ವ್ಯಾಪಾರಸ್ಥರ ಅಂಗಡಿಗಳ ಮೇಲೆ ನೋಟಿಸ್ ಅಂಟಿಸಿ ಬಂದಿದ್ದಾರೆ.
ಬ್ಯಾಂಕ್ ಮುಂದೆ ರೈತರಿಂದ ಪ್ರತಿಭಟನೆ ಆಕ್ರೋಶಗೊಂಡ ರೈತರು, ವ್ಯಾಪಾರಸ್ಥರು ಬ್ಯಾಂಕ್ ಆಫ್ ಬರೋಡಾ ದಿಬ್ಬೂರು ಶಾಖೆಗೆ ಮುತ್ತಿಗೆ ಹಾಕಿ ಮ್ಯಾನೇಜರ್ ಜೊತೆ ಮಾತಿನ ಚಕಮಕಿ ನಡೆಸಿ, ನಮಗೆ ಕಾಲಾವಕಾಶ ಕೊಡಿ ಹಣ ಪಾವತಿ ಮಾಡುತ್ತೇವೆ. ಅದು ಬಿಟ್ಟು ನೀವು ಏಕಾಏಕಿ ನೋಟಿಸ್ ಜಾರಿಗೊಳಿಸಿದರೆ ಕಟ್ಟುವುದಾದರೂ ಹೇಗೆ ಎಂದು ಕೇಳಿಕೊಂಡಿದ್ದಾರೆ. ಆದರೂ ಲೆಕ್ಕಿಸದ ಮ್ಯಾನೇಜರ್ ದಬ್ಬಾಳಿಕೆ ತೋರಿದ್ದಾರೆ. ಅಲ್ಲಿಂದ ಹೊರಬಂದ ರೈತರು ಮ್ಯಾನೇಜರ್ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆ ಮಾಹಿತಿಯನ್ನು ತಿಳಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಎಚ್.ಎಸ್. ಅನಂದ್ ಇದುವರೆಗೂ ನಮಗೆ ಯಾವುದೇ ದೂರುಗಳು ಬಂದಿಲ್ಲ. ನೋಟಿಸ್ ಬಗ್ಗೆಯೂ ಮಾಹಿತಿ ತಿಳಿದುಕೊಳ್ಳುತ್ತೇನೆ. ತಕ್ಷಣ ಬ್ಯಾಂಕ್ ಅಫ್ ಬರೋಡಾ ದಿಬ್ಬೂರು ಶಾಖೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ :ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಾಳೆ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ