ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಕೇಂದ್ರ ಸರ್ಕಾರವು ಎಲ್ಲೆಡೆಯೂ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಈ ಕಾರ್ಯಕ್ರಮದಿಂದಾಗಿ ಬಹಳಷ್ಟು ಗ್ರಾಮ ಪಂಚಾಯಿತಿಗಳು ನೈರ್ಮಲ್ಯ ಕಾಪಾಡಿ ಮಾದರಿ ಎನಿಸಿಕೊಂಡಿವೆ. ಆದರೆ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು ಮಾತ್ರ ಎಂದಿಗೂ ಬದಲಾಗಲ್ಲ ಎಂಬುದನ್ನು ಸಾಬೀತು ಪಡಿಸುತ್ತಿವೆ. ಈ ಹಿಂದೆ ಹೇಗಿದ್ದವೋ ಹಾಗೇ ಗಬ್ಬು ನಾರುತ್ತಿವೆ.
ಹೋಬಳಿ ಕೇಂದ್ರದಲ್ಲಿ ಸ್ವಚ್ಛ ಭಾರತ ಅಭಿಯಾನ ಬಲು ದೂರ ಗೂಳೂರು ಹೋಬಳಿ ಕೇಂದ್ರದಲ್ಲಿ ನಂಜಿರೆಡ್ಡಿಪಲ್ಲಿ ಗ್ರಾಮದ ಕಡೆ ಹೋಗುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ನೀರು ಸರಬರಾಜು ಮಾಡುವ ಪೈಪ್ ಒಡೆದು ರಸ್ತೆಯಲ್ಲಿ ಹರಿದರೂ ಅದರ ಕಡೆ ಗಮನ ಕೊಡುವವರಿಲ್ಲ.
ಅಂಗಡಿಗಳ ತ್ಯಾಜ್ಯವನ್ನು ದೊಡ್ಡಕೆರೆಯ ಕಟ್ಟೆಯ ಸಮೀಪ ರಾಶಿ ರಾಶಿ ಸುರಿಯಲಾಗಿದೆ. ಮಾಂಸದ ಅಂಗಡಿಗಳ ತ್ಯಾಜ್ಯ, ಕೋಳಿ ಪುಕ್ಕ, ಕರುಳುಗಳು ಸೇರಿದಂತೆ ತ್ಯಾಜ್ಯ ಮಾಂಸದ ಚೂರುಗಳನ್ನು ಸುರಿಯಲಾಗಿದೆ. ಇದರಿಂದಾಗಿ ಕ್ರಿಮಿ ಕೀಟಗಳು ಹೆಚ್ಚಾಗುತ್ತಿವೆ. ಹದ್ದು, ಕಾಗೆಗಳ ಕಾಟವೂ ಜಾಸ್ತಿಯಾಗುತ್ತಿದೆ. ಇದು ಗ್ರಾಮದ ಕೊನೆಯಲ್ಲಿನ ಮನೆಗಳ ನಿವಾಸಿಗಳಿಗೆ ಆತಂಕವಾಗಿ ಪರಿಣಮಿಸಿದೆ.