ಬಾಗೇಪಲ್ಲಿ: ತಾಲೂಕಿನ ಗ್ರಾಮೀಣ ಭಾಗದ ಹಲವೆಡೆ ಅಂಚೆ ಇಲಾಖೆ ಸಿಬ್ಬಂದಿ ಕಚೇರಿಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಸಮರ್ಪಕವಾಗಿ ವೃದ್ಧಾಪ್ಯ ವೇತನ, ಅಂಗವಿಕಲರ ಮಾಶಾಸನವನ್ನು ಸಮರ್ಪಕವಾಗಿ ವಿತರಿಸುವುದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಫಲಾನುಭವಿಗಳನ್ನು ಕಚೇರಿಗೆ ಬರುವಂತೆ ತಿಳಿಸಿ ನಿತ್ಯವೂ ಅವರನ್ನು ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ತಾಲೂಕಿನ ಗ್ರಾಮೀಣ ಅಂಚೆ ಕಚೇರಿ ಸಿಬ್ಬಂದಿ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.
ಇದಕ್ಕೆ ತಾಜಾ ನಿದರ್ಶನವೆಂಬಂತೆ ತಾಲೂಕಿನ ಯಲ್ಲಂಪಲ್ಲಿ ಗ್ರಾಮದ ಅಂಚೆ ಕಚೇರಿಯ ಅಧಿಕಾರಿಗಳ ಕಾರ್ಯ ವೈಖರಿ. ನನಗೆ 6 ತಿಂಗಳಿಂದ ವೃದ್ಧಾಪ್ಯ ವೇತನ ವಿತರಣೆಯಾಗಿಲ್ಲ. ವಯಸ್ಸಾದವರಿಗೆ ವೇತನ ನೀಡದೇ ಅಂಚೆ ಸಿಬ್ಬಂದಿ ತೊಂದರೆ ನೀಡುತ್ತಿದ್ದಾರೆ. ಪ್ರತಿನಿತ್ಯ ಕಚೇರಿಗೆ ಹೋಗಿ ಅಂಗಲಾಚಿದರೂ ವೃದ್ಧಾಪ್ಯ ವೇತನ ನೀಡುತ್ತಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ವೃದ್ಧೆ ವೆಂಕಟಮ್ಮ ಕಣ್ಣೀರು ಸುರಿಸಿದರು.
ಕಳೆದ 4 ತಿಂಗಳುಗಳಿಂದ ಮಾಶಾಸನ ವಿತರಣೆಯಾಗಿಲ್ಲ, ಕೇಳಿದ್ರೆ ಇನ್ನೂ ಬಂದಿಲ್ಲ ಎನ್ನುತ್ತಾರೆ. ಮುಖ್ಯ ಅಂಚೆ ಕಚೇರಿಗೆ ಹೋಗಿ ಕೇಳಿದರೆ, ಯಲ್ಲಂಪಲ್ಲಿ ಶಾಖೆ ಅಂಚೆಯಲ್ಲಿ ವಿಚಾರಿಸಿ ಎನ್ನುತ್ತಾರೆ. ಅಂಗವಿಕಲರಿಗೆ 4 ತಿಂಗಳಾದರೂ ಮಾಶಾಸನ ನೀಡದಿರುವುದು ಖಂಡನೀಯ ಎಂದು ದಿವ್ಯಾಂಗ ಬಾಲಕ ನವೀನ್ ಎಂಬುವರ ತಂದೆ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.