ಚಿಕ್ಕಮಗಳೂರು:ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಕುರಿತು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಹರಿಹರಪುರ ಮಠದ ಸಚ್ಚಿದಾನಂದ ಸ್ವಾಮೀಜಿ ಸ್ಪಷ್ಟನೆ ಕೊಟ್ಟಿದ್ದಾರೆ.
''ರಾಮ ಮಂದಿರದ ಬಗ್ಗೆ ಅಸಮಾಧಾನದ ವದಂತಿ ಕೇಳಿ ಬರ್ತಿದೆ. ಶಂಕರ ಪರಂಪರೆ ಹಾಗೂ ಶ್ರೀರಾಮನಿಗೆ ಏನು ಸಂಬಂಧ ಅಂತ ಮೊದಲು ತಿಳಿದು ಕೊಳ್ಳಬೇಕು. ಶಂಕರ ಪರಂಪರೆಯ ಮೂಲ ಪುರುಷರು ಆದಿ ಶಂಕರರು. ಶಂಕರರು ಅದ್ವೈತ ಸಿದ್ದಾಂತದ ಮೂಲಕ ಪರಮಾತ್ಮನನ್ನು ತತ್ವ ಸ್ವರೂಪದಲ್ಲಿ ಆರಾಧಿಸುವುದನ್ನು ಜಗತ್ತಿಗೆ ತಿಳಿಸಿದ್ದಾರೆ. ಹರಿ ಹರ ಪರ ಬ್ರಹ್ಮನ ಅತ್ಯಂತ ಸಮಾನವಾದ ರೂಪಗಳು. ಹರಿಹರನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಪರಂಪರೆ ಶಂಕರ ಪರಂಪರೆಯಾಗಿದೆ'' ಎಂದು ಸ್ವಾಮೀಜಿ ತಿಳಿಸಿದರು.
''ಹರಿ ಅಂದ್ರೆ ಮಹಾವಿಷ್ಣು, ವಿಷ್ಣುವಿನ 7ನೇ ಅವತಾರವೇ ಶ್ರೀರಾಮ, ಶಂಕರರು ಶ್ರೀರಾಮನ ಪರಮ ಭಕ್ತರಾಗಿದ್ದರು. ಶಂಕರರು ರಾಮನ ಬಗ್ಗೆ ಸ್ತೋತ್ರಗಳನ್ನು ರಚಿಸಿ ಶ್ರೀರಾಮನಿಗೆ ಸಮರ್ಪಣೆ ಮಾಡಿದ್ದಾರೆ. ಶಂಕರರು ಸ್ಥಾಪಿಸಿದ ಪೀಠಗಳಲ್ಲಿ ಶ್ರೀ ರಾಮನನ್ನು ನಿರಂತರವಾಗಿ ಆರಾಧಿಸುವಂತೆ ಆದೇಶಿಸಿದ್ದಾರೆ. ಶಂಕರ ಪರಂಪರೆಯ ಎಲ್ಲ ಮಠಗಳು ಶ್ರೀರಾಮನನ್ನು ಆರಾಧಿಸಿ ಕೊಂಡು ಬರುತ್ತಿದ್ದಾರೆ. ಶ್ರೀರಾಮ ಮಂದಿರ ಅನ್ನೋದು ಎಲ್ಲಾ ಮಠಗಳಲ್ಲೂ ಇದೆ. ಶ್ರೀರಾಮ ಭಾರತೀಯ ಸಂಸ್ಕೃತಿಗೆ ಸೇರಿದ ದೇವರು. ನಮ್ಮ ದೇಶದ ಹೆಗ್ಗುರುತು ಭಗವಾನ್ ಶ್ರೀರಾಮ, ಈ ಪವಿತ್ರ ದೇಶದ ಅಸ್ಮಿತೆ'' ಎಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಮಠದ ಸಚ್ಚಿದಾನಂದ ಸ್ವಾಮೀಜಿ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.