ಚಿಕ್ಕಬಳ್ಳಾಪುರ:ಯುತಿಯೊಂದಿಗೆ ಯುವಕನೊಬ್ಬ ಹೋಟೆಲ್ಗೆ ಬಂದಾಗ, ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿಯ ಹೋಟೆಲ್ವೊಂದಕ್ಕೆ ಯವತಿಯೊಂದಿಗೆ ಹಲ್ಲೆಗೊಳಗಾದ ಯುವಕ ಬಂದಿರುತ್ತಾನೆ. ಇದನ್ನು ಗಮನಿಸಿದ ಯುವಕರ ಗುಂಪೊಂದು ಯವತಿಯೊಂದಿಗೆ ಬಂದಾತನ ಬಳಿ ತೆರಳಿ ಅವನ ಹಿನ್ನೆಲೆ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ನಂತರ ಈ ಯುವತಿ ಜೊತೆ ನಿನಗೆ ಏನು ಸಂಬಂಧ ಇದೆ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾರೆ. ಇದರ ನಡುವೆ ಯುವತಿ, ಯುವಕನ ರಕ್ಷಣೆಗೆ ಮುಂದಾಗಿದ್ದಾಳೆ. ಆತನ ಮೇಲೆ ಹಲ್ಲೆ ನಡೆಸದಂತೆ ತಡೆಯಲು ಪ್ರಯತ್ನಿಸಿದ್ದಾಳೆ. ಬಳಿಕ ಆ ಗುಂಪು ಯುವತಿಗೆ ಪೋಷಕರ ದೂರವಾಣಿ ಸಂಖ್ಯೆ ಕೊಡುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಬೆದರಿದ ಯುವತಿ ಕ್ಷಮೆಯಾಚಿಸಿದ್ದಾಳೆ. ಇಷ್ಟಾದರೂ ಬಿಡದ ಯುವಕರ ಗುಂಪು ಯುವಕನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಯುವಕರಿಂದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಫುರ ನಗರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ನಕ್ಕಲಕುಂಟೆಯ 20 ವರ್ಷದ ಯುವಕ, ಹಾಗೂ 21 ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದರಿಂದ ನೊಂದ ಯುವತಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನಡಿ ಪೊಲೀಸರು IPC ಸೆಕ್ಷನ್ 354 A And D, 341, 323, 153A, 504, 506 ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿದ ನಂತರ ಬಂಧಿತರನ್ನು ಪೊಲೀಸರು ನ್ಯಾಯಾಧೀಶರ ನಿವಾಸಕ್ಕೆ ಕರದೊಯ್ದಿದ್ದಾರೆ. ಸದ್ಯ ಇಬ್ಬರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.