ಗುಡಿಬಂಡೆ (ಚಿಕ್ಕಬಳ್ಳಾಪುರ): ತಾಲೂಕಿನ ಉಲ್ಲೋಡು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಛಾವಣಿ ಕುಸಿದಿದ್ದು, ಆಶಾ ಕಾರ್ಯಕರ್ತೆ ಸುಮ ಎಂಬುವರಿಗೆ ತಲೆಗೆ ಪೆಟ್ಟಾಗಿದ್ದು, ಅದೃಷ್ಟಾವಶಾತ್ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ತಾಲೂಕಿನ ಉಲ್ಲೋಡು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಮಕ್ಕಳಿಗೆ ಚುಚ್ಚುಮದ್ದು ಹಾಕುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕಟ್ಟಡದ ಮೇಲ್ಚಾವಣಿ ಕುಸಿದಿದೆ. ಅದರ ಪರಿಣಾಮವಾಗಿ ಅಲ್ಲಿದ್ದ ಆಶಾ ಕಾರ್ಯಕರ್ತೆಯ ತಲೆಯ ಮೇಲೆ ಮೇಲ್ಚಾವಣಿಗೆ ಹಾಕಿದ್ದ ಸಿಮೆಂಟ್ ಬಿದ್ದು ಗಾಯವಾಗಿದೆ. ಇನ್ನು ಗಾಯಗೊಂಡ ಆಶಾ ಕಾರ್ಯಕರ್ತೆಯನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆಶಾ ಕಾರ್ಯಕರ್ತೆ ಸದ್ಯ ಆರೋಗ್ಯವಾಗಿದ್ದು, ಯಾವುದೇ ದುರಂತ ಸಂಭವಿಸಿಲ್ಲ. ಪವಾಡ ಎಂಬಂತೆ ಆಶಾ ಕಾರ್ಯಕರ್ತೆಯ ಜೊತೆಗಿದ್ದ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನು ಉಲ್ಲೋಡು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸುಮಾರು 60 ವರ್ಷಗಳಷ್ಟು ಹಳೆಯದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.