ಚಿಕ್ಕಬಳ್ಳಾಪುರ: ಸ್ಕೂಟಿಯಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಚಾಕು ಬೀಸಿ ಹುಚ್ಚಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ ನಗರದ ಬಜಾರ್ ರಸ್ತೆಯ ಬಲಮುರಿ ವೃತ್ತದಲ್ಲಿ ನಡೆದಿತ್ತು. ಘಟನೆ ನಡೆದು ಕೇವಲ 4 ಗಂಟೆಯೊಳಗೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ರಾತ್ರಿ ಸುಮಾರು 9:30ರ ವೇಳೆಗೆ ಸ್ಕೂಟಿಯಲ್ಲಿ ಜರ್ಸಿ ಧರಿಸಿ, ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದ ಖದೀಮ 8 ಜನರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ 7 ಜನ ಪುರುಷರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ನಾಗೇಶ್ ಭೇಟಿ ನೀಡಿ, ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 4 ಗಂಟೆ ಅವಧಿಯೊಳಗೆ ಚಿಕ್ಕಬಳ್ಳಾಪುರ ಪೊಲೀಸರು ತಾಲೂಕಿನ ಕಳವಾರ ಬಳಿ ರೌಡಿ ಶೀಟರ್ ಅರ್ಜನ್ನನ್ನು ವಶಕ್ಕೆ ಪಡೆದುಕೊಂಡು, ಆರೋಪಿಯಿಂದ ಚಾಕು ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿಯನ್ನ ಜಪ್ತಿ ಮಾಡಿಕೊಂಡಿದ್ದಾರೆ.