ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಇರಲಿಲ್ಲ. ಜನತಾದಳದಲ್ಲಿದ್ದು ಎಲ್ಲ ಬಗೆಯ ಅಧಿಕಾರ ಅನುಭವಿಸಿದ ಅವರು, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಅಜ್ಜವಾರದಲ್ಲಿ 494 ಕುಟುಂಬಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು. ಕಾಂಗ್ರೆಸ್ನವರು ಪ್ರಜಾ ಧ್ವನಿ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಿಲ್ಲ.
ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು ಸಿದ್ದರಾಮಯ್ಯ ಅಲ್ಲ:ಆದರ ಬದಲಿಗೆ ವೈಯಕ್ತಿಕ ಆರೋಪವನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳಾಗಿದ್ದವರು, ಸಚಿವರಾಗಿದ್ದವರು, ಜನಪ್ರತಿನಿಧಿಗಳು ಪ್ರಜಾಪ್ರಭುತ್ವದಲ್ಲಿ ಹೇಗೆ ಮಾತಾಡಬೇಕೆಂದು ಮೊದಲು ಕಲಿಯಬೇಕು. ಬಾರ್ನಲ್ಲಿ ಕುಡಿದು ಬಂದಂತೆ ಸಭೆಯಲ್ಲಿ ಮಾತನಾಡಬಾರದು ಎಂದು ಆರೋಪಿಸಿದರು. ಕಾಂಗ್ರೆಸ್ನಲ್ಲಿ ನನಗೆ ಟಿಕೆಟ್ ದೊರಕುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ನನಗೆ 2013ರಲ್ಲಿ ಟಿಕೆಟ್ ಕೊಡಿಸಿದ್ದು ನನ್ನ ರಾಜಕೀಯ ಗುರು ಎಸ್.ಎಂ. ಕೃಷ್ಣ ಹಾಗೂ ಡಾ. ಜಿ. ಪರಮೇಶ್ವರ್ ಅವರು. ನಾನು ಸಿದ್ದರಾಮಯ್ಯ ಅವರ ಬಳಿ ಟಿಕೆಟ್ ಗಾಗಿ ಏನೂ ಸಹಾಯ ಕೇಳಿಯೇ ಇಲ್ಲ ಎಂದು ತಿಳಿಸಿದರು.
ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿಕೊಂಡಿದ್ದೆ. ಆದರೆ ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ. ಚುನಾಯಿತ ಪ್ರತಿನಿಧಿಗಳು ತಮ್ಮ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಆ ಎಲ್ಲಾ ಗುಣಮಟ್ಟ ಬಿಟ್ಟು ಕೀಳಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ಬಿಟ್ಟು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಏಕೆ ಬಂದರು: ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಇದ್ದರೇ? ಅವರು ಮೊದಲು ಜನತಾದಳದಲ್ಲಿದ್ದರು. ಅದೇ ಪಕ್ಷದಲ್ಲಿದ್ದು ಸಚಿವ, ಉಪಮುಖ್ಯಮಂತ್ರಿಯಾದರು. ಅಂದಮೇಲೆ ಕಾಂಗ್ರೆಸ್ ಗೆ ಏಕೆ ಬಂದರು? ಆಶಯಕ್ಕಾ? ಬದ್ಧತೆಗಾ? ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ? ಇಷ್ಟು ವಯಸ್ಸಾಗಿರುವವರೇ ಹೀಗೆ ಮಾಡುವಾಗ, ಯುವಕರಾದವರು ನಾವೇನು ಮಾಡಬೇಕು? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರು ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ, ಅನೈತಿಕವಾಗಿ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಲು ನಮ್ಮನ್ನು ಬಲಿಪಶು ಮಾಡಿದ್ದರು ಎಂದು ಸಚಿವ ಸುಧಾಕರ್ ಆರೋಪಿಸಿದರು.
ನಾನು ನನ್ನ ಫಲಿತಾಂಶ ನೋಡಿ ದೇವನಹಳ್ಳಿಗೆ ಹೋಗುವ ವೇಳೆಗೆ ಸಿದ್ದರಾಮಯ್ಯನವರು ಜನತದಾಳದ ಕೈ ಹಿಡಿದುಕೊಂಡುಬಿಟ್ಟಿದ್ದರು. ಇದು ಸರಿಯಲ್ಲ, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಸ್ಪಷ್ಟವಾಗಿ ಹೇಳಿದ್ದೆ. ಸಿದ್ದರಾಮಯ್ಯನವರ ಮನೆಗೆ ಹೋಗಿ ಮಾತನಾಡಿದಾಗ, ರಾಹುಲ್ ಗಾಂಧಿಯವರ ಮಾತಿನಂತೆ ಒಪ್ಪಿಕೊಂಡು ಬಿಟ್ಟಿದ್ದೇನೆ ಎಂದು ಹೇಳಿದ್ದರು. ಆದರೆ ನಾವೇನೂ ಒಪ್ಪಿಕೊಳ್ಳಬೇಕು ಎಂದೇನಿಲ್ಲ ಎಂದರು.