ಬಾಗೇಪಲ್ಲಿ: ತಾಲೂಕಿನ ಗುಮ್ಮನಾಯಕನಪಾಳ್ಯ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾದ ಗುಮ್ಮನಾಯಕನಪಾಳ್ಯ ಕೋಟೆಯ ಕೆಲವು ಕಾಮಗಾರಿ ಕಳಪೆಯಾಗಿವೆ ಎಂದು ಗ್ರಾಮಸ್ಥ ಹಾಗೂ ವಕೀಲ ರವಿ ಆರೋಪಿಸಿದ್ದಾರೆ.
ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ, ಹೀಗಾಗಿ ಮಳೆ, ಗಾಳಿಗೆ ಗೋಡೆಗಳು ಉರುಳಿ ಬೀಳುತ್ತಿವೆ. ಇದೇ ಜೂ. 6 ರಂದು ಕೋಟೆಯ ಗೋಡೆಗಳು ಉರುಳಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ಕೊಂಚ ಎಚ್ಚರಿಕೆ ತಪ್ಪಿದ್ದರೆ ಕುರಿಗಳು ಮತ್ತು ಒಬ್ಬ ಮನುಷ್ಯನಿಗೆ ಪ್ರಾಣಾಪಾಯವಾಗುತ್ತಿತ್ತು ಎಂದರು.
ಮಳೆ, ಗಾಳಿಗೆ ಬೀಳುತ್ತಿದೆ ಗುಮ್ಮನಾಯಕನಪಾಳ್ಯ ಕೋಟೆ ಇಂಥ ಕಳಪೆ ಕಾಮಗಾರಿಗೆ ಅಧಿಕಾರಿಗಳು, ಕಾಂಟ್ರಾಕ್ಟರ್ಗಳೇ ನೇರ ಹೊಣೆಯಾಗಿದ್ದಾರೆ. ಹಣದ ಆಸೆಗೆ ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರವಿ ಆರೋಪಿಸಿದರು.
ಕೋಟೆಯ ಗೋಡೆಯನ್ನು ಎರಡು ಸಲ ಕಟ್ಟಿಸಲಾಗಿದ್ದು, ಎರಡು ಬಾರಿಯೂ ನೆಲಕ್ಕೆ ಉರುಳಿದೆ. ಇಂಥ ಕಳಪೆ ಕಾಮಗಾರಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಿದೆ. ಇಂಥ ಕಳಪೆ ಕಾಮಗಾರಿ ಮಾಡಿರುವವರ ವಿರುದ್ಧ ಜಿಲ್ಲಾಡಳಿತ ಮತ್ತು ಸರ್ಕಾರ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.