ಚಿಕ್ಕಬಳ್ಳಾಪುರ: 10 ವರ್ಷಗಳಿಂದಲೂ ಬರಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಮಲೆನಾಡಿನ ಮುದ ನೀಡುತ್ತಿದೆ. ಆಮೆಗತಿಯಲ್ಲಿ ಸಾಗುತ್ತಿದ್ದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಇದಕೆಲ್ಲ ಕಾರಣವಾಗಿದ್ದು, ಕಳೆದ 10 ದಿನಗಳಿಂದ ಬಿಡುವು ನೀಡದೆ ಸುರಿಯುತ್ತಿರುವ ಮಳೆರಾಯ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯ ಆರ್ಭಟ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ಮಳೆಯ ಕೊರೆತೆಯಿಂದಾಗಿ ಕುಡಿಯುವ ನೀರು ಸೇರಿದಂತೆ ಕೃಷಿ ಕೆಲಸಗಳಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಜಿಲ್ಲೆಯ ಜನರ ಕುಡಿಯುವ ನೀರಿಗೆ ಆಧಾರವಾಗಿದ್ದ ಜಕ್ಕಲಮಡಗು ಸಹ ಬತ್ತಿಹೋಗಿತ್ತು.
ಇಲ್ಲಿನ ಕೇತನಹಳ್ಳಿ ಬಳಿ ಮಿನಿ ಫಾಲ್ಸ್ಗಳು ಉಂಟಾಗಿದ್ದು, ಪ್ರಕೃತಿ ಪ್ರೇಮಿಗಳನ್ನು ಸೆಳೆಯುತ್ತಿದೆ. ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರಿನಲ್ಲಿಯೂ ಮಳೆ ಮುಂದುವರೆದಿದೆ.
ಜಿಲ್ಲಾಧಿಕಾರಿ ಶ್ರಮಕ್ಕೆ ಸಿಕ್ಕಿತು ಪ್ರತಿಫಲ: ಈಚೆಗೆ ವರ್ಗಾವಣೆಯಾಗಿ ಬಂದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲೆಯಲ್ಲಿ ಕಲ್ಯಾಣಿಗಳ ಸ್ವಚ್ಚತೆಗೆ ಮುಂದಾಗಿದ್ದರು. ಪುರತನ ಕಲ್ಯಾಣಿಗಳಲ್ಲಿ ತುಂಬಿದ್ದ ಹೂಳು ತೆಗೆದು ಹಾಕಿ, ಸ್ವಚ್ಚತೆ ಮಾಡಲಾಗಿತ್ತು. ಮಳೆ ನೀರು ತುಂಬಿಕೊಳ್ಳುವಂತೆ ವ್ಯವಸ್ಥೆ ಕೂಡ ಮಾಡಿಸಿದ್ದರು. ಇದರಿಂದ ಕಲ್ಯಾಣಿಗಳಲ್ಲಿ ನೀರುತುಂಬಿಕೊಂಡು, ಜನತೆಯ ಮೆಚ್ಚುಗೆ ಗಳಿಸಿದ್ದಾರೆ. ಅದೇ ರೀತಿ ನಿರ್ಮಿಸಲಾಗಿದ್ದ ಚೆಕ್ ಡ್ಯಾಂ ಗಳಲ್ಲೂ ನೀರು ತುಂಬಿಕೊಂಡಿದೆ.