ಚಿಕ್ಕಬಳ್ಳಾಪುರ: ಮ್ಯಾಟ್ರಿಮೋನಿಯಲ್ಲಿ ವಧು - ವರ ಹುಡುಕಾಟದಲ್ಲಿದ್ದಾರಾ ....? ಹಾಗಾದ್ರೆ ಈ ಸ್ಟೋರಿ ನೀವು ನೋಡಲೇಬೇಕು. ಯಾಕೆ ಅಂತೀರಾ, ಇಟಲಿ ಬ್ಯೂಟಿಯ ಮದುವೆ ಆಗಲು ಹೊರಟ ಭಾರತದ ಹಳ್ಳಿ ಹೈದನೊಬ್ಬ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡು ಸಾಲಗಾರನಾಗಿ ಈಗ ಪೊಲೀಸ್ ಠಾಣೆ ಅಲೆದಾಡುವಂತಾಗಿದೆ.
ವಿಚ್ಚೇಧಿತನಾದ ಚಿಕ್ಕಬಳ್ಳಾಪುರ ನಗರದ ನಿವಾಸಿ ಮುನಿರಾಜು ಎಂಬಾತ ಮದುವೆ ಆಗಬೇಕು ಅಂತ ಕನ್ನಡ ಮ್ಯಾಟ್ರಿಮೋನಿಯಲ್ಲಿ ತನ್ನ ಪ್ರೊಫೈಲ್ ಕ್ರಿಯೇಟ್ ಮಾಡಿ, ವಧುವಿನ ಹುಡುಕಾಟದಲ್ಲಿ ತೊಡಗಿದ್ದ. ಅದೊಂದು ದಿನ ಇಂಟರ್ ನ್ಯಾಷನಲ್ ನಂಬರ್ನಿಂದ ವಾಟ್ಸ್ಆ್ಯಪ್ ಮುಖಾಂತರ ಚಾಟ್ ಮಾಡಿದ ಬ್ಯೂಟಿ ಒಬ್ಬಳು ನಾನು ಮ್ಯಾಟ್ರಿಮೋನಿಯಲ್ಲಿ ನಿಮ್ಮ ಪ್ರೊಪೈಲ್ ನೋಡಿದೆ. ನಿಮ್ಮನ್ನ ಮದುವೆ ಆಗಬೇಕು ಅಂತಿದ್ದೀನಿ ಅಂದಿದ್ದಾಳೆ.
ಇಟಲಿ ಬ್ಯೂಟಿ ಮದುವೆ ಆಗಲೋಗಿ ಹಳ್ಳಕ್ಕೆ ಬಿದ್ದ ಹಳ್ಳಿ ಹೈದ ಬ್ಯೂಟಿಯ ಫೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಹಾರಾಡಿದ ಮುನಿರಾಜು, ಆಕೆ ಜೊತೆ ಚಾಟಿಂಗ್ಗೆ ಇಳಿದಿದ್ದಾನೆ. ಅತ್ತ ಕಡೆಯಿಂದ ವಾಟ್ಸ್ಆ್ಯಪ್ ಮುಖಾಂತರ ಕರೆ ಮಾಡಿದ ಆಕೆ, ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲ ನಿಮ್ಮ ಪ್ರೊಪೈಲ್ ತೋರಿಸಿದ್ದೇನೆ ಭಾರತಕ್ಕೆ ಬಂದು ನಿಮ್ಮನ್ನ ಮದುವೆಯಾಗ್ತೀನಿ ಎಂದು ಮುನಿರಾಜುವಿಗೆ ಹೇಳಿದ್ದಾಳೆ.
ಮೊದಲೆರೆಡು ತಿಂಗಳು ಇದೇ ರೀತಿ ಚಾಟಿಂಗ್, ಇಂಟರ್ನೆಟ್ ಕಾಲ್ ಮಾಡಿದ ಆಕೆ, ನಾನು ಇಂಡಿಯಾಗೆ ಬರ್ತೀನಿ ಇಟಲಿಯಿಂದ ಟಿಕೆಟ್ ಬುಕ್ ಮಾಡಬೇಕು ಹಣ ಕಳಿಸು ಅಂತ ಟಿಕೆಟ್ ಮಾಡೋಕೆ ಹಣ ಪಡೆದುಕೊಂಡಿದ್ದಾಳೆ. ಇಟಲಿಯಿಂದ ದೆಹಲಿಗೆ ಬಂದಿದ್ದೀನಿ ನನ್ನ ಬಳಿ ಇಟಲಿಯ ಒಂದೂವರೆ ಕೋಟಿ ಕರೆನ್ಸಿ ಇದೆ. ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ವರು ಹಿಡಿದುಕೊಂಡಿದ್ದಾರೆ. ಅವರಿಗೆ ಟ್ಯಾಕ್ಸ್ ಪೇ ಮಾಡಿದ್ರೇ ಎಲ್ಲಾ ಹಣ ವಾಪಾಸ್ ಮಾಡ್ತಾರೆ. ಆ ಹಣ ನಿನಗೆ ಕೊಡ್ತೀನಿ ಅಂತ ಹೇಳಿ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಒಂದಲ್ಲ ಒಂದು ನೆಪ ಹೇಳಿ ಮುನಿರಾಜು ಬಳಿ ಬರೋಬ್ಬರಿ 27 ಲಕ್ಷ ರೂಪಾಯಿ ಹಣ ಪಡೆದು ಕೊನೆಗೆ ಫೋನ್ ಸ್ವಿಚ್ಡ್ ಆಫ್ ಮಾಡಿ ಈಗ ಸುಮ್ಮನಾಗಿದ್ದಾಳೆ.
ಫೋನ್ ಸ್ವಿಚ್ಡ್ ಆಫ್ ಆದರಿಂದ ಅನುಮಾನಗೊಂಡ ಮುನಿರಾಜು, ಮೊದಲು ಬ್ಯಾಂಕಿಗೆ ಹೋಗಿ ಹಣ ಹಾಕಿದ ಖಾತೆಗಳನ್ನು ಪರೀಶೀಲನೆ ಮಾಡಿಸಿದ್ದಾನೆ. ಆಗ ಗೊತ್ತಾಗಿದ್ದು ಅವೆಲ್ಲವೂ ಫೇಕ್ ಅಕೌಂಟ್ ಎಂದು. ಹೀಗಾಗಿ ಸುಂದರಿ ಸಿಗ್ತಾಳೆ ಮದುವೆ ಅಗೋಣ ಅಂತ ಒಂದಲ್ಲ ಎರಡಲ್ಲ 30 ಲಕ್ಷ ಸಾಲ ಮಾಡಿ ನೀಡಿದ ಹಣ ಈಗ ಕೆರೆಗೆ ಚೆಲ್ಲಿದಂತಾಗಿದೆ. ಈ ಹಿನ್ನೆಲೆ ಮೋಸಹೋದ ಮುನಿರಾಜು ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾನೆ.