ಚಿಕ್ಕಬಳ್ಳಾಪುರ: ಕಣ್ಣಿಗೆ ಬಟ್ಟೆ ಕಟ್ಟಿಗೊಂಡು ಪಟಪಟನೇ ಅಕ್ಷರಗಳನ್ನು ಹೇಳುವ ಪುಟಾಣಿಯ ಹೆಸರು ಸ್ಮೃತಿ. ಚಿಕ್ಕಬಳ್ಳಾಪುರ ನಗರದ 7ನೇ ವಾರ್ಡ್ನ ಗಂಗನಮಿದ್ದೆಯಲ್ಲಿ ನೆಲೆಸಿರುವ ಶಿಕ್ಷಕ ದಂಪತಿ ಎನ್.ಅರುಣ್‌ಕುಮಾರ್ ಹಾಗೂ ಎಂ ಜಿ ಸುನೀತ ಅವರ ದ್ವಿತೀಯ ಪುತ್ರಿ. 5ನೇ ವಯಸ್ಸಿಗೆ ಎರಡು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಚಿಕ್ಕಬಳ್ಳಾಪುರದ ಪ್ರತಿಭೆ 'ಸ್ಮೃತಿ'ಗೆ ಕಲಾಂ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ನಗರದ ಬಿಜಿಎಸ್ ವರ್ಲ್ಡ್ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಮೃತಿ, ತನ್ನ ಅತ್ಯಂತ ಕಿರಿಯ ವಯಸ್ಸಿನಲ್ಲಿ 'ಕಲಾಂ ವರ್ಲ್ಡ್ ರೆಕಾರ್ಡ್'ನಲ್ಲಿ ವಿನೂತನ ದಾಖಲೆ ನಿರ್ಮಿಸಿದ್ದಾಳೆ. ಈ ಮಗುವಿನ ಅದ್ಭುತ ನೆನಪಿನ ಶಕ್ತಿ ಗುರುತಿಸಿ ಜುಲೈ18, 2021ರಂದು 'ಕಲಾಂ ವರ್ಲ್ಡ್ ರೆಕಾರ್ಡ್' ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಅಲ್ಲದೇ ಜೂನ್ 22, 2021ರಂದು 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಸಂಸ್ಥೆಯವರು ಕೂಡ ಪ್ರಶಸ್ತಿ ನೀಡಿ ಗೌರವಿಸಿದ್ದು, ಕೇವಲ ಒಂದು ತಿಂಗಳ ಅಂತರದಲ್ಲಿ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಅದ್ಭುತ ಬಾಲ ಪ್ರತಿಭೆ ಎನಿಸಿದ್ದಾಳೆ. ಮಗಳ ಸಾಧನೆಯ ಬಗ್ಗೆ ತಂದೆ ಅರುಣ್‌ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಸಾಧನೆಗೆ ಕಾರಣವಾದ ಅಂಶಗಳು :
- ವೇಗವಾಗಿ ದೇಹದ ಭಾಗಗಳನ್ನು ಗುರುತಿಸಿ ಹೇಳುವುದು.
- 100 ರಿಂದ 1ರವರೆಗಿನ ಸಂಖ್ಯೆಗಳ ವಾಚನ.
- Z ಯಿಂದ Aವರೆಗೆ ಇಂಗ್ಲಿಷ್ ವರ್ಣಮಾಲೆ ಹೇಳುವುದು.
- ಇಂಗ್ಲಿಷ್, ಹಿಂದಿ ಕಠಿಣ ಪದಗಳನ್ನು ನಿರರ್ಗಳವಾಗಿ ಓದುವುದು.
- ಹಿಂದಿ ವರ್ಣಮಾಲೆಯನ್ನು ಜೋಡಿಸುವುದು.
- ಗಡಿಯಾರದಲ್ಲಿ ಪಟಪಟನೆ ಸಮಯ ಗುರುತಿಸಿ ಹೇಳುವುದು.
- ಗಣಿತದ ಕ್ಲಿಷ್ಟ ಪರಿಕಲ್ಪನೆಗಳಾದ ಭಿನ್ನರಾಶಿ, ಸಂಖ್ಯೆಗಳ ಹೋಲಿಕೆ
- ವಿವಿಧ ರೀತಿಯ ಕಠಿಣ ಸಂಖ್ಯೆಗಳ ಗುರುತಿಸುವಿಕೆ, ಓದುವಿಕೆ, ಬರೆಯುವಿಕೆ ಇತ್ಯಾದಿ ಅಂಶಗಳನ್ನು ಗುರ್ತಿಸುವುದರಲ್ಲಿ ಪ್ರಾವೀಣ್ಯತೆ ಪಡೆದಿದ್ದಾಳೆ.
ಸದ್ಯ ಸ್ಮೃತಿಯ ಸಾಧನೆಗೆ ಜಿಲ್ಲೆಯ ಜನತೆಯಲ್ಲದೆ ರಾಜ್ಯದ ಜನತೆಯೂ ಸಹ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.