ಚಿಕ್ಕಬಳ್ಳಾಪುರ: ಅಧಿಕ ಹಣದ ಆಸೆ ತೋರಿಸಿ ಸರಿಸುಮಾರು 52 ಲಕ್ಷ ಹಣ ಪಂಗನಾಮ ಹಾಕಿ ಪ್ರಾಣ ಬೆದರಿಕೆ ಹಾಕಿರುವ ಘಟನೆಯೊಂದು ಚಿಂತಾಮಣಿ ತಾಲೂಕಿನ ಐ.ಕುರಪಲ್ಲಿ ಗ್ರಾಮದಲ್ಲಿ ನಡೆದಿದೆ.
ರತ್ನಮ್ಮ ಎಂಬುವವರು ವಂಚನೆಗೆ ಒಳಗಾದ ಮಹಿಳೆ. ರತ್ನಮ್ಮ ತಮ್ಮ ಮಗ ಶ್ರೀನಾಥ್ ಅವರೊಂದಿಗೆ ನಗರದಲ್ಲಿ ಜವಳಿ ವ್ಯಾಪಾರ ಮಾಡುತ್ತಿದ್ದರು. ಈ ವೇಳೆ, ಶಿವಾ ಎಂಬ ವ್ಯಕ್ತಿ ಪರಿಚಯವಾಗಿದ್ದು, ಲೋನ್ ಮುಖಾಂತರ ಕಾರುಗಳನ್ನು ತಗೆದುಕೊಂಡರೇ ಸಾಕಷ್ಟು ಹಣ ಮಾಡಬಹುದೆಂದು ನಂಬಿಸಿ ರತ್ನಮ್ಮರಿಂದ ಸುಮಾರು 5 ಕಾರುಗಳನ್ನು ಖರೀದಿ ಮಾಡಿಸಿದ್ದಾನೆ.
ನಂತರ ಕಾರುಗಳನ್ನು ನೋಡಿಕೊಳ್ಳಲು ನಗರದ ಹರೀಶ್ ಎಂಬ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದಾನೆ. ಈ ವೇಳೆ ಹರೀಶ್, ಇದಕ್ಕಿಂತಲು ಹೆಚ್ಚಿನ ಹಣದ ಆಸೆ ತೋರಿಸಿ ಕಾರುಗಳ ಮೇಲೆ ಸಾಲ ತೆಗೆದುಕೊಳ್ಳುವಂತೆ ಸೂಚಿಸಿ 20 ಲಕ್ಷ ಲೋನ್ ಹಾಗೂ ಕೈಸಾಲವಾಗಿ 20 ಲಕ್ಷ ರೂಪಾಯಿ ಮತ್ತು ರತ್ನಮ್ಮ ಅವರ ಬಳಿ ಇದ್ದ ಒಡವೆಗಳನ್ನು ಮಾರಿ 12 ಲಕ್ಷ ರೂ ಸೇರಿದಂತೆ ಒಟ್ಟು 52 ಲಕ್ಷ ರೂಪಾಯಿ ಹಣವನ್ನು ಹರೀಶ್ ಪಡೆದಿದ್ದ.