ಗುಡಿಬಂಡೆ(ಚಿಕ್ಕಬಳ್ಳಾಪುರ): ಕುರಿ ದೊಡ್ಡಿ ಮೇಲೆ ಎರಡು ಚಿರತೆಗಳು ದಾಳಿ ಮಾಡಿ 14 ಕುರಿಗಳನ್ನು ಬಲಿ ಪಡೆದಿರುವ ಘಟನೆ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ಕುರಿದೊಡ್ಡಿ ಮೇಲೆ ಚಿರತೆ ದಾಳಿ.. ಗ್ರಾಮದ ನಿವಾಸಿ ಶಿವಾರೆಡ್ಡಿ ಬಿನ್ ಬಾವಣ್ಣ ಎಂಬುವರ ಕುರಿದೊಡ್ಡಿ ಮೇಲೆ ತಡ ರಾತ್ರಿ ಸುಮಾರು 2 ಗಂಟೆ ವೇಳೆಗೆ ಎರಡು ಚಿರತೆಗಳು ಕುರಿದೊಡ್ಡಿಯಲ್ಲಿದ್ದ 17 ಕುರಿಗಳ ಮೇಲೆ ದಾಳಿ ನಡೆಸಿವೆ. ಈ ಪೈಕಿ 14 ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನುಳಿದ 3 ಕುರಿಗಳು ತೀವ್ರವಾಗಿ ಗಾಯಗೊಂಡಿವೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆಯವರು ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಗ್ರಾಮಸ್ಥರು ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಚಿರತೆ ದಾಳಿಯಿಂದ ಕುರಿಗಳನ್ನು ಕಳೆದುಕೊಂಡ ಮಾಲೀಕನಿಗೆ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಚರ್ಚಿಸಲಾಗುವುದು ಎಂದು ಉಪವಿಭಾಗಾಧಿಕಾರಿಗಳು ಭರವಸೆ ನೀಡಿದರು.