ಚಾಮರಾಜನಗರ: ಪ್ರೀತಿ ವಿಚಾರದಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಹೊಸೂರು ಬಡಾವಣೆಯಲ್ಲಿ ನಡೆದಿದೆ. ಹೊಸೂರು ಬಡಾವಣೆಯ ಚಿಕ್ಕರಾಜು (30) ಕೊಲೆಯಾದ ಯುವಕ. ಬೆಂಗಳೂರಿನಲ್ಲಿ ಲೈಟ್ ಬಾಯ್ ಆಗಿದ್ದ ಚಿಕ್ಕರಾಜು, ಹಬ್ಬಕ್ಕೆಂದು ಮನೆಗೆ ಬಂದಿದ್ದಾಗ ಕೊಲೆಯಾಗಿದ್ದು, ಮೃತನ ತಮ್ಮ ಸೋನಾಕ್ಷಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಪ್ರೀತಿ ವಿಚಾರವಾಗಿ ಸೋನಾಕ್ಷಿ ತಂದೆ ಮಹದೇವನಾಯ್ಕ, ಸಹೋದರರಾದ ಕಿರಣ್ ಮತ್ತು ಅಭಿಷೇಕ ಅವರು ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ಮೃತನ ಪಾಲಕರು ದೂರಿದ್ದು, ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ 6 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳೆಲ್ಲರೂ ತಲೆ ಮರೆಸಿಕೊಂಡಿದ್ದಾರೆ.
ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವು ಆರೋಪ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೇ ಎಂದು ಪಾಲಕರು ಆರೋಪಿಸಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಯಳಂದೂರು ತಾಲೂಕಿನ ಅಗರ ಗ್ರಾಮದ ಶ್ಯಾಮಲಾ ಮತ್ತು ಮಂಜುನಾಥ್ ದಂಪತಿಯ ಮಗು ಮೃತಪಟ್ಟಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವು ಹುಟ್ಟಿದ ಬಳಿಕ ನಾಲ್ಕು ದಿನ ಮಗು ಚೆನ್ನಾಗಿತ್ತು, ಐದನೇ ದಿನ ಮಗುವಿಗೆ ಬ್ಲಡ್ ಇನ್ಫೆಕ್ಷನ್, ಜಾಂಡೀಸ್ ಆಗಿದೆ ಎಂಬ ರಿಪೋರ್ಟ್ ಬಂದಿದೆ. ನಂತರ ಪರೀಕ್ಷೆಗೆ ಒಳಪಡಿಸಿ ರಿಪೋರ್ಟ್ ಬಂದ ಒಂದು ದಿನವಾದರೂ ವೈದ್ಯರು ಚಿಕಿತ್ಸೆ ನೀಡಿಲ್ಲ, ಮೈಸೂರಿಗೂ ರೆಫರ್ ಮಾಡಿಲ್ಲ ವೈದ್ಯರು ಮತ್ತು ಸಿಬ್ಬಂದಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪಾಲಕ ಮಂಜುನಾಥ್ ದೂರಿದ್ದಾರೆ.
ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಮೇಲೆ ತಡವಾಗಿ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು, ರಿಪೋರ್ಟ್ ಬಂದ ತಕ್ಷಣ ಮೈಸೂರಿಗೆ ಕಳುಹಿಸಿದ್ದರೇ ಮಗು ಬದುಕುಳಿಯುತ್ತಿತ್ತು. ವೈದ್ಯರು ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಳಂದೂರು - ಮೂಲ ವಿಗ್ರಹ ಕಳವು:ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಪುರಾತನ ಕಾಲದ ದೇವಾಲಯದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಮೂಲ ವಿಗ್ರಹ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಂದಿನಂತೆ ಊರಿನ ಜನರು ಪೂಜೆ ಸಲ್ಲಿಸಲು ಗುಡಿಗೆ ಬಂದ ಸಂದರ್ಭದಲ್ಲಿ ವೀರಭದ್ರೇಶ್ವರ ಸ್ವಾಮಿ ವಿಗ್ರಹವನ್ನು ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಊರಿನ ಮುಖಂಡರು ಯಳಂದೂರು ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇಬ್ಬರು ನಾಪತ್ತೆ: ಯಳಂದೂರು ಹಾಗೂ ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ತಂದೆ-ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಇದ್ದಕ್ಕಿದ್ದಂತೆ ಟೆಂಟ್ ನಿಂದ 19 ವರ್ಷದ ಲಲಿತಾ ಬಾಯಿ ಎಂಬಾಕೆ ನಾಪತ್ತೆಯಾಗಿದ್ದಾಳೆ. ಯಳಂದೂರು ಠಾಣೆಗೆ ಪಾಲಕರು ದೂರು ಕೊಟ್ಟಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಆಲನಹಳ್ಳಿ ಗ್ರಾಮದ 42 ವರ್ಷದ ಕೇಶವಮೂರ್ತಿ ಎಂಬಾತ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದಾರೆ ಎಂದು ಮಾಂಬಳ್ಳಿ ಪೊಲೀಸ್ ಠಾಣೆಗೆ ಸಂಬಂಧಿಕರು ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ಚಿಕ್ಕೋಡಿ : ಮನೆ ಕಳ್ಳತನಕ್ಕೆ ಬಂದು ಬಾಲಕಿಯನ್ನ ಅಪಹರಿಸಿದ ಖತರ್ನಾಕ್ ಕಳ್ಳ