ಕರ್ನಾಟಕ

karnataka

ETV Bharat / state

ಶಿವನಸಮುದ್ರ‌‌ದಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿಗೆ ಬಿದ್ದ ಯುವಕ ಸಾವು : ಮತ್ತೋರ್ವ ಪಾರು - ಸೆಲ್ಪಿ ತೆಗೆಯಲು ಹೋಗಿ ಆಯತಪ್ಪಿ ನೀರಿಗೆ ಬಿದ್ದ ಯುವಕ

ಸೆಲ್ಪಿ ತೆಗೆಯಲು ಹೋಗಿ ಆಯತಪ್ಪಿ ನೀರಿಗೆ ಬಿದ್ದ ಯುವಕ ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಶಿವನಸಮುದ್ರದಲ್ಲಿ ನಡೆದಿದೆ.

youth-died-while-taking-selfi-in-shivanasamudra
ಶಿವನಸಮುದ್ರ‌‌ದಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿಗೆ ಬಿದ್ದ ಯುವಕ ಸಾವು : ಮತ್ತೋರ್ವ ಪಾರು

By ETV Bharat Karnataka Team

Published : Sep 4, 2023, 9:09 PM IST

ಚಾಮರಾಜನಗರ: ಸೆಲ್ಫಿ ತೆಗೆಯಲು ಹೋಗಿ ಆಯತಪ್ಪಿ ನೀರಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ‌‌ದ ಜೀರೋ ಪಾಯಿಂಟ್ ಗೇಟ್ ಬಳಿ ಸೋಮವಾರ ನಡೆದಿದೆ. ಬೆಂಗಳೂರು ಮೂಲದ ಪುನೀತ್ (18) ಮೃತ ದುರ್ದೈವಿ. ನೀರಿನಲ್ಲಿ ಸಿಲುಕಿದ್ದ ಲೋಹಿತ್ ಎಂಬಾತನನ್ನು ತೆಪ್ಪ ನಡೆಸುವವರು ರಕ್ಷಣೆ ಮಾಡಿದ್ದಾರೆ.

ಬೆಂಗಳೂರಿನಿಂದ ಪುನೀತ್, ಲೋಹಿತ್, ತೇಜಸ್ವಿನಿ, ರಿಷಾ ಎಂಬವರು ಶಿವನಸಮುದ್ರ‌‌ಕ್ಕೆ ಬಂದಿದ್ದರು. ಈ ವೇಳೆ ಸೆಲ್ಫಿ ತೆಗೆದುಕೊಳ್ಳಲು ಪುನೀತ್ ಹಾಗೂ ಲೋಹಿತ್ ಕಲ್ಲುಗಳ ಮೇಲೆ ಏರಿದ್ದರು. ಈ ಸಂದರ್ಭ ಇಬ್ಬರು ಕಾಲು ಜಾರಿ ನೀರಿಗೆ ಬಿದ್ದು ಜೀರೋ ಪಾಯಿಂಟ್ ಗೇಟ್​ನಲ್ಲಿ ಸಿಲುಕಿದ್ದರು‌‌. ಇದನ್ನು ಕಂಡ ತೆಪ್ಪ ಸವಾರ ಶಾಂತರಾಜು ಎಂಬವರು ತಕ್ಷಣ ನೀರಿಗೆ ಹಾರಿ ಇಬ್ಬರನ್ನೂ ಮೇಲಕ್ಕೆತ್ತಿದ್ದಾರೆ. ಆದರೆ ಅದಾಗಲೇ ಪುನೀತ್ ಮೃತಪಟ್ಟಿದ್ದು, ಲೋಹಿತ್ ಬಚಾವಾ ಆಗಿದ್ದಾನೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರದಲ್ಲಿ ಹಾವು ಕಡಿದು ವಿದ್ಯಾರ್ಥಿ ಸಾವು :ಹಾವು ಕಡಿದು ಬಿಕಾಂ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಸಮೀಪದ ಸಿಡೇಗಲ್ಲು ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಪುರ ಗ್ರಾಮದ ಬಿಕಾಂ ವಿದ್ಯಾರ್ಥಿ ಜೆ. ಹರೀಶ್ (21) ಮೃತ ದುರ್ದೈವಿ.

ಮೃತ ಹರೀಶ್ ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದನು. ಕಳೆದ ದಿನ ತಮ್ಮ ಕುಟುಂಬದವರೊಂದಿಗೆ ಸಿಡೇಗಲ್ಲು ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ರಾತ್ರಿ ಹೊತ್ತಿನಲ್ಲಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿದೆ ಎನ್ನಲಾಗಿದೆ. ತಕ್ಷಣವೇ ಯುವಕನನ್ನು ಚಿಕಿತ್ಸೆಗೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್​ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರೀಶ್​ ಮೃತಪಟ್ಟಿದ್ದಾನೆ. ಗುಡೇಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರಿನಲ್ಲಿ ವ್ಯಕ್ತಿಗೆ ಚಾಕು ಇರಿತ :ಹಳೆ ವೈಷಮ್ಯದ ಹಿನ್ನೆಲೆ ಕ್ರಿಕೆಟ್ ಆಡುವಾಗ ಒಂದು ಗುಂಪಿನ ಯುವಕರು ಮತ್ತೊಂದು ಗುಂಪಿನ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಏರಿಯಾದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಇಬ್ರಾಹಿಂನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ರವಾನಿಸಲಾಗಿದೆ.

ನಗರದ ಗೌರಿಕಾಲುವೆಯಲ್ಲಿ ಕ್ರಿಕೆಟ್ ಆಡುವಾಗ ಇಬ್ರಾಹಿಂ ಹಾಗೂ ಮತ್ತೊಂದು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಇಬ್ರಾಹಿಂಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಲಾಗಿದೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕರಿಬ್ಬರನ್ನು ಕೊಂದು ಮೂಟೆ ಕಟ್ಟಿದ ತಂದೆ!

For All Latest Updates

ABOUT THE AUTHOR

...view details