ಚಾಮರಾಜನಗರ:ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯುವಜನತೆ ಅದರಲ್ಲೂ ಪದವೀಧರರು ಹೆಚ್ಚಾಗಿ ಗೆಲುವಿನ ನಗೆ ಬೀರಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯುವಕರ ಕೈಹಿಡಿದ ಮತದಾರ ಹನೂರು ತಾಲೂಕಿನ ಕೌದಳ್ಳಿ ಗ್ರಾ.ಪಂ.ವ್ಯಾಪ್ತಿಯ ಚಿಕ್ಕಾಲತ್ತೂರು ಗ್ರಾಮದಲ್ಲಿ 27ರ ಹರೆಯದ ಶಿವಕುಮಾರ್ ಜಿ.ಎಂಬವವರು ಗೆಲ್ಲುವ ಮೂಲಕ ಜನಸೇವೆಗೆ ಮುಂದಾಗಿದ್ದಾರೆ. ಇವರು, ಬಿಇಡಿ, ಎಂಎ ಪತ್ರಿಕೋದ್ಯಮ ಪದವೀಧರರು.
ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ 26 ವರ್ಷದ ಸುರೇಶ್ ವಿಜಯಶಾಲಿಯಾಗಿದ್ದಾರೆ. ಕೌದಳ್ಳಿ ಗ್ರಾ.ಪಂ.ವ್ಯಾಪ್ತಿಯ ಬಿಇಡಿ ವಿದ್ಯಾರ್ಥಿನಿ ಪ್ರಿಯದರ್ಶಿನಿ ಕೂಡ ಲಾಟರಿ ಮೂಲಕ ವಿಜಯಮಾಲೆ ಧರಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ 25 ವರ್ಷದ ಪ್ರವೀಣ್ ಜಯಭೇರಿ ಬಾರಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾ.ಪಂ.ನಲ್ಲಿ ಪುನೀತ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ. ಹಳ್ಳಿ ಫೈಟ್ಗೆ ಇಳಿದಿದ್ದ ಬಹುಪಾಲು ಯುವಕರು ವಿದ್ಯಾವಂತರಾಗಿರುವುದು ವಿಶೇಷ.
ದಂಪತಿ, ವಾರಗಿತ್ತಿಯರಿಗೆ ಜಯಮಾಲೆ
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾ.ಪಂಚಾಯತ್ ವ್ಯಾಪ್ತಿಯ ಪಾಲಿಮೇಡು ವಾರ್ಡ್ನಿಂದ ಪತಿ ರಾಮಲಿಂಗಂ, ಸಂದನಪಾಳ್ಯ ವಾರ್ಡ್ನಿಂದ ಪತ್ನಿ ನದಿಯಾ ಸ್ಫರ್ಧಿಸಿ ಗೆದ್ದಿದ್ದಾರೆ. ಇದೇ ಗ್ರಾ.ಪಂ.ವ್ಯಾಪ್ತಿಯಲ್ಲಿ ವಾರಗಿತ್ತಿಯರಾದ ಕುಪ್ಪಾಯಿ ಹಾಗೂ ಭೋದಮ್ಮ ವಿಜಯಮಾಲೆ ಧರಿಸಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಗ್ರಾಮ ಸಮರದಲ್ಲಿ ಯುವ ಮಿಂಚು ಜೋರಾಗಿದ್ದು, ಭರವಸೆಯನ್ನಿಟ್ಟು ಮತ ನೀಡಿರುವ ಜನರ ನಿರೀಕ್ಷೆಯಂತೆ ಗೆದ್ದವರು ಅಭಿವೃದ್ಧಿ ಕಾರ್ಯ ಮಾಡಬೇಕಿದೆ.