ಕೊಳ್ಳೇಗಾಲ/ಚಾಮರಾಜನಗರ: ಪೋಷಕರು ಕಾಲೇಜಿಗೆ ಹೋಗು ಎಂದು ಬಲವಂತ ಮಾಡಿದ್ದಕ್ಕೆ ಮನನೊಂದ ಯುವತಿಯೋರ್ವಳು ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಮೇಗಲದೊಡ್ಡಿ ಗ್ರಾಮದ ಲೂರ್ಧಸ್ವಾಮಿ ಎಂಬುವರ ಮಗಳು ದಿವ್ಯಾ ಮೃತ ದುರ್ದೈವಿ. ಈಕೆ ಕಳೆದ ವರ್ಷ ಕೊರೊನಾ ಹಿನ್ನೆಲೆ ಲಾಕ್ಡೌನ್ನಿಂದ ಕಾಲೇಜಿಗೆ ಹೋಗದೆ ಕೂಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಕಾಲೇಜು ಆರಂಭವಾದ ಬಳಿಕ ಓದಲು ಹೋಗು ಎಂದು ಪೋಷಕರು ಬಲವಂತ ಮಾಡಿ ಕಾಲೇಜಿಗೆ ಕಳುಹಿಸಿದ್ದರು. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ದಿವ್ಯಾ ಇಂದು ಕ್ರಿಮಿನಾಶಕವನ್ನು ಸೇವಿಸಿದ್ದಾಳೆ. ಕ್ರಿಮಿನಾಶಕ ಕುಡಿದು ನರಳುತ್ತಿದ್ದ ಮಗಳನ್ನು ನೋಡಿದ ಪೋಷಕರು ತಕ್ಷಣ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.